ಸುಬ್ರಮಣ್ಯ ಭಾರತಿ
ಸುಬ್ರಮಣ್ಯ ಭಾರತಿ | |
---|---|
Born | Ettayapuram, Madras Presidency, India | ೧೧ ಡಿಸೆಂಬರ್ ೧೮೮೨
Died | September 11, 1921 Madras, India | (aged 38)
Other names | Bharathiyar, Shelleydasan, Sakthi Dasan[೧] |
Movement | Indian independence movement |
ಸುಬ್ರಮಣ್ಯ ಭಾರತಿ (ತಮಿಳು:சுப்பிரமணிய பாரதி) (ಡಿಸೆಂಬರ್ 11, 1882 - ಸೆಪ್ಟೆಂಬರ್ 11, 1921) ಭಾರತದ, ತಮಿಳುನಾಡು ರಾಜ್ಯಕ್ಕೆ ಸೇರಿದ ಒಬ್ಬ ತಮಿಳು ಕವಿ, ಸ್ವಾತಂತ್ರ್ಯ ಹೋರಾಟಗಾರ ಹಾಗು ಮೂರ್ತಿ ಪೂಜೆಯ ವಿರೋಧಿ, ಸಮಾಜ ಸುಧಾರಕರಾಗಿದ್ದರು. ಮಹಾಕವಿ ಭಾರತಿ (ಮಹಾ ಕವಿ ಎಂಬ ಪ್ರಶಂಸನೀಯ ಉಪಾಧಿಯನ್ನು ಹಲವು ಭಾರತೀಯ ಭಾಷೆಗಳು ತಮ್ಮ ಕವಿಗಳಿಗೆ ನೀಡಿ ಗೌರವಿಸುತ್ತವೆ) ಎಂದು ಪರಿಚಿತರಾದ ಇವರನ್ನು ಭಾರತದ ಅತ್ಯುತ್ತಮ ಕವಿಗಳಲ್ಲಿ ಒಬ್ಬರೆಂದು ಶ್ಲಾಘಿಸಲಾಗುತ್ತದೆ.
ಪರಿಚಯ
[ಬದಲಾಯಿಸಿ]ಭಾರತಿಯವರು ಬಹುತೇಕ ಕೃತಿಗಳನ್ನು ರಚಿಸುವುದರ ಜೊತೆಗೆ ಗದ್ಯ ಹಾಗು ಪದ್ಯ ಎರಡೂ ಶೈಲಿಗಳ ರಚನೆಯಲ್ಲಿ ನಿಪುಣತೆ ಹೊಂದಿದ್ದರು. ಅವರ ರಚನೆಗಳು, ದಕ್ಷಿಣ ಭಾರತದಲ್ಲಿ ಭಾರತೀಯ ಸ್ವಾತಂತ್ರ್ಯಸಂಗ್ರಾಮ ಕ್ಕೆ ಜನಸಮೂಹವನ್ನು ಸಂಘಟಿಸುವಲ್ಲಿ ನೆರವಾದವು. ಭಾರತೀಯ ಇತಿಹಾಸದಲ್ಲಿ ಜರುಗಿದ ಮಹತ್ವದ ಘಟನೆಗಳಿಗೆ ಭಾರತಿಯವರು ಸಾಕ್ಷಿಯಾದರು, ಅವರ ಸಮಕಾಲೀನರಲ್ಲಿ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ನಾಯಕರುಗಳಾದ ಮಹಾತ್ಮ ಗಾಂಧಿ, ಬಾಲಗಂಗಾಧರ ತಿಲಕ್, ಶ್ರೀ ಅರಬಿಂದೊ ಹಾಗು V.V.S.ಐಯ್ಯರ್ ಸೇರಿದ್ದಾರೆ.
ಆರಂಭಿಕ ಜೀವನ
[ಬದಲಾಯಿಸಿ]- ಭಾರತಿಯವರು ಚಿನ್ನಸಾಮಿ ಸುಬ್ರಮಣ್ಯ ಐಯ್ಯರ್ ಹಾಗು ಎಲಕ್ಕುಮಿ(ಲಕ್ಷ್ಮಿ)ಅಮ್ಮಾಳ್ ದಂಪತಿಗಳ ಪುತ್ರ "ಸುಬ್ಬಯ್ಯ"ನಾಗಿ ಡಿಸೆಂಬರ್ 11, 1882ರಲ್ಲಿ ಎತ್ತಯಾಪುರಂ ಎಂಬ ತಮಿಳು ಗ್ರಾಮದಲ್ಲಿ ಜನಿಸಿದರು. ಇವರು ತಿರುನಲ್ವೇಲಿಯಲ್ಲಿರುವ ಸ್ಥಳೀಯ ಪ್ರೌಢಶಾಲೆ "M.D.T. ಹಿಂದೂ ಕಾಲೇಜಿನಲ್ಲಿ" ತಮ್ಮ ಶಿಕ್ಷಣ ಪಡೆದರು. ಬಹಳ ಕಿರಿವಯಸ್ಸಿನಲ್ಲೇ ಅವರು ಸಂಗೀತದ ಶಿಕ್ಷಣ ಪಡೆದರು.
- ಜೊತೆಗೆ ಅವರ 11ನೇ ವಯಸ್ಸಿನಲ್ಲಿ ಕವನಗಳು ಹಾಗು ಗೀತೆಗಳನ್ನು ರಚಿಸಲು ಎತ್ತಯಾಪುರಂನ ಆಸ್ಥಾನ ಕವಿಗಳು ಹಾಗು ಸಂಗೀತಗಾರರ ಸಮ್ಮೇಳನಕ್ಕೆ ಆಹ್ವಾನಿತರಾಗಿದ್ದರು. ಇಲ್ಲಿ ಅವರಿಗೆ "ಭಾರತಿ" ಎಂಬ ಬಿರುದು ನೀಡಲಾಯಿತು.(ವಿದ್ಯಾದೇವತೆಯಾದ ಸರಸ್ವತಿಯಿಂದ ಅನುಗ್ರಹಿತನಾದವನು").
- ಭಾರತಿ ತಮ್ಮ ತಾಯಿಯನ್ನು ಐದನೇ ವಯಸ್ಸಿನಲ್ಲಿ ಕಳೆದುಕೊಂಡರೆ, ತಂದೆ, ಅವರು 16ನೇ ವಯಸ್ಸಿನವರಿದ್ದಾಗ ನಿಧನ ಹೊಂದಿದರು. ಅವರ ಶಿಸ್ತು ಪಾಲಕ ತಂದೆ ಅವರನ್ನು ಪೋಷಿಸಿದರು, ಇವರಿಗೆ ತಮ್ಮ ಮಗ ಆಂಗ್ಲ ಭಾಷೆ ಕಲಿತು, ಗಣಿತದಲ್ಲಿ ಮೇಲ್ಗೈ ಸಾಧಿಸಿ, ಇಂಜಿನಿಯರ್ ಪದವಿ ಪಡೆದು ನೆಮ್ಮದಿಯ ಜೀವನ ನಡೆಸಬೇಕೆಂಬ ಆಶಯವಿತ್ತು. ಆದಾಗ್ಯೂ, ಹಗಲುಗನಸನ್ನು ಕಾಣುತ್ತಿದ್ದ ಭಾರತಿಗೆ ತಮ್ಮ ವಿದ್ಯಾಭ್ಯಾಸದ ಮೇಲೆ ಗಮನ ಹರಿಸಲು ಸಾಧ್ಯವಾಗಲಿಲ್ಲ.
- ಆಗ 1897ರಲ್ಲಿ, ಬಹುಶಃ ಅವರ ಮೇಲೆ ಜವಾಬ್ದಾರಿ ಹೊರಿಸುವ ಉದ್ದೇಶದಿಂದ, ಅವರ ತಂದೆ 14 ವರ್ಷದ ಭಾರತಿಗೆ ಅವರ ಏಳು ವರ್ಷದ ಸೋದರಸಂಬಂಧಿ ಚೆಲ್ಲಮಾಳ್ ರೊಂದಿಗೆ ವಿವಾಹ ಮಾಡುತ್ತಾರೆ. ತಮ್ಮ ಬಾಲ್ಯ ವಿವಾಹದ ನಂತರ, ಭಾರತಿ, ಬಾಹ್ಯ ಜಗತ್ತನ್ನು ನೋಡುವ ಕುತೂಹಲದಿಂದ, 1898ರಲ್ಲಿ ಬನಾರಸ್ ಗೆ ಹೋಗುತ್ತಾರೆ. ಅವರ ಜೀವನದ ಮುಂದಿನ ನಾಲ್ಕು ವರ್ಷಗಳು ಅನ್ವೇಷಣೆಗೆ ದಾರಿಮಾಡಿಕೊಟ್ಟವು.
- ಈ ಅವಧಿಯಲ್ಲಿ ಅವರು ತಮ್ಮ ಸಣ್ಣ ಹಳ್ಳಿಯ ಆಚೆಗೆ, ಒಂದು ದೇಶದ ಕೋಲಾಹಲಕ್ಕೆ ಕಾರಣವಾಗುವ ದೊಂಬಿಗೆ ಸಾಕ್ಷಿಯಾದರು. ಭಾರತಿ, ಮಧುರೈನ ಸೇತುಪತಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದರು.(ಇದೀಗ ಇದು ಒಂದು ಮಾಧ್ಯಮಿಕ ಶಾಲೆಯಾಗಿದೆ) ಅಲ್ಲದೇ ತಮ್ಮ ಜೀವಿತಾವಧಿಯಲ್ಲಿ ಹಲವಾರು ಬಾರಿ ನಿಯತಕಾಲಿಕದ ಸಂಪಾದಕರಾಗಿ ದುಡಿದರು.
ಅಭಿಪ್ರಾಯಗಳು
[ಬದಲಾಯಿಸಿ]- ಬನಾರಸ್ ನಲ್ಲಿ ನೆಲಸಿದ್ದ ಅವಧಿಯಲ್ಲಿ(ಈ ಸ್ಥಳವು ಕಾಶಿ ಹಾಗು ವಾರಣಾಸಿ ಎಂದೂ ಪರಿಚಿತವಾಗಿದೆ), ಭಾರತಿಯವರು ಹಿಂದೂ ಆಧ್ಯಾತ್ಮಿಕತೆ ಹಾಗು ರಾಷ್ಟ್ರೀಯತೆಯ ಪ್ರಭಾವಕ್ಕೆ ಒಳಗಾದರು. ಇದು ಅವರ ದೃಷ್ಟಿಕೋನವನ್ನು ವಿಸ್ತಾರಗೊಳಿಸಿತು, ಜೊತೆಗೆ ಅವರು ಸಂಸ್ಕೃತ, ಹಿಂದಿ ಹಾಗು ಆಂಗ್ಲ ಭಾಷೆಗಳನ್ನು ಕಲಿತರು. ಇದರ ಜೊತೆಯಲ್ಲಿ, ಅವರು ತಮ್ಮ ಬಾಹ್ಯರೂಪವನ್ನು ಬದಲಾಯಿಸಿಕೊಂಡರು.
- ಬಹುಶಃ ಹಿಂದೂ ಸಮಾಜದಲ್ಲಿ ಪೇಟವನ್ನು ಧರಿಸುವ ಜನರಿಂದ ಭಾರತಿಯವರು ಪ್ರಭಾವಿತರಾದರು.(ಭಾರತೀಯ ಸಂಪ್ರದಾಯ ಸಮಾಜದಲ್ಲಿ ಪೇಟ ಧರಿಸುವುದು ಒಂದು ಸಂಪ್ರದಾಯ, ಪೇಟಗಳು ರಾಜರು ಧರಿಸುವ ಕಿರೀಟಗಳನ್ನು ಪ್ರತಿನಿಧಿಸುತ್ತವೆ) ಹಾಗು ತಾವು ಸಹ ಧರಿಸಲು ಆರಂಭಿಸಿದರು. ಅವರು ಗಡ್ಡವನ್ನೂ ಸಹ ಬೆಳೆಸುವುದರ ಜೊತೆಗೆ ನೇರ-ನಡೆ ನುಡಿ ರೂಢಿಸಿಕೊಂಡರು.[೨]
- ಆ ಕೂಡಲೇ, ಭಾರತಿ, ಸಾಮಾಜಿಕ ಬಹಿಷ್ಕರಣೆ ಹಾಗು ಸಾಂಪ್ರದಾಯಿಕ ದಕ್ಷಿಣ ಭಾರತೀಯ ಸಮಾಜದ ಮೂಢನಂಬಿಕೆಗಳಾಚೆಗೂ ತಮ್ಮ ಗಮನ ಹರಿಸಿದರು. ಡಿಸೆಂಬರ್ 1905ರಲ್ಲಿ, ಬನಾರಸ್ ನಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ಸ್ ಅಧಿವೇಶನದಲ್ಲಿ ಪಾಲ್ಗೊಂಡರು. ತಮ್ಮ ಸ್ವಸ್ಥಳಕ್ಕೆ ಹಿಂದಿರುಗುವ ಮಾರ್ಗದಲ್ಲಿ, ಅವರು ವಿವೇಕಾನಂದರ ಮಾನಸ ಪುತ್ರಿ ಸಹೋದರಿ ನಿವೇದಿತಾರನ್ನು ಸಂಧಿಸಿದರು. ಈ ಭೇಟಿಯಿಂದ ಭಾರತಿಯವರಲ್ಲಿನ ಮತ್ತೊಂದು ಅಮೂರ್ತ ಭಾವ ಹುಟ್ಟಿಕೊಂಡಿತು.
- ಮಹಿಳೆಯರ ಹಕ್ಕುಗಳ, ಅವರ ಹಿತಾಸಕ್ತಿಯ ರಕ್ಷಣೆಯನ್ನು ಗುರುತಿಸುವೆಡೆಗಿನ ಅವರ ಪ್ರತಿಭಟನೆ ಮಹಿಳಾವರ್ಗದ ಆಶಾಕಿರಣವೆನಿಸಿತು. ಮಹಿಳಾ ಸ್ವಾತಂತ್ರ್ಯ ಬಗ್ಗೆ ಭಾರತಿಯವರ ಮನಸ್ಸಿನಲ್ಲಿ ತೀವ್ರ ಕಳವಳ ಉಂಟಾಯಿತು. ಅವರು 'ನವ ನಾರಿಯು' ಶಕ್ತಿಯ ಮೂಲವೆಂದು ಭಾವಿಸುತ್ತಾರೆ, ಪುರುಷನ ಮನಃಪೂರ್ವಕ ಸಂಗಾತಿಯಾದ ಈಕೆಯೊಂದಿಗೆ ಸಹಪ್ರಯತ್ನದ ಮೂಲಕ ಒಂದು ಹೊಸ ಪ್ರಪಂಚವನ್ನೇ ನಿರ್ಮಿಸಬಹುದು ಎಂದವರ ಅಭಿಪ್ರಾಯವಾಗಿದೆ.
- ಈ ಅವಧಿಯಲ್ಲಿ, ಬಾಹ್ಯ ಜಗತ್ತಿನ ಬಗ್ಗೆ ಸರಿಯಾದ ಮಾಹಿತಿಯ ಅವಶ್ಯಕತೆಯಿದೆಯೆಂದು ಗ್ರಹಿಸಿದ ಭಾರತಿಯವರು, ಪಶ್ಚಿಮದ ಪತ್ರಿಕೋದ್ಯಮ ಜಗತ್ತು ಹಾಗು ಮುದ್ರಣ ಮಾಧ್ಯಮದಲ್ಲಿ ಆಸಕ್ತರಾದರು. ಉದ್ದೇಶ ಸಾಧನೆಗಾಗಿ ಭಾರತಿ 1904ರಲ್ಲಿ ತಮಿಳು ದಿನಪತ್ರಿಕೆ ಸ್ವದೇಶಮಿತ್ರನ್ ನಲ್ಲಿ ಸಹಾಯಕ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಾರೆ.
- ಏಪ್ರಿಲ್ 1907ರಲ್ಲಿ, ತಮಿಳು ವಾರಪತ್ರಿಕೆ ಇಂಡಿಯಾ ಹಾಗು ಆಂಗ್ಲ ದಿನಪತ್ರಿಕೆ ಬಾಲ ಭಾರತಮ್ ನಲ್ಲಿ M.P.T. ಆಚಾರ್ಯರೊಂದಿಗೆ ಜೊತೆಗೂಡಿ ಸಂಪಾದಕತ್ವ ಆರಂಭಿಸುತ್ತಾರೆ. ಈ ದಿನಪತ್ರಿಕೆಗಳು ಭಾರತಿಯವರ ಕ್ರಿಯಾಶೀಲತೆಯನ್ನು ಸ್ಪಷ್ಟಪಡಿಸುವ ಒಂದು ಮಾಧ್ಯಮವಾಗಿಯೂ ಸಹ ಕೆಲಸಮಾಡಿದವು. ಈ ಉದ್ದೇಶ ಈ ಅವಧಿಯಲ್ಲಿ ಅತ್ಯಂತ ಯಶಸ್ಸನ್ನು ಪಡೆಯಿತು.
- ಈ ಆವೃತ್ತಿಗಳಲ್ಲಿ ಭಾರತಿಯವರು ತಮ್ಮ ಕವನಗಳನ್ನು ಪ್ರಕಟಿಸಲು ಆರಂಭಿಸಿದರು. ಧಾರ್ಮಿಕ ಸ್ತುತಿಗೀತೆಗಳಿಂದ ಹಿಡಿದು ರಾಷ್ಟ್ರೀಯ ಗೀತೆಗಳವರೆಗೂ, ದೇವರು ಹಾಗು ಮನುಷ್ಯನ ನಡುವಿನ ಸಂಬಂಧಗಳ ಮೇಲಿನ ಚಿಂತನೆಗಳಿಂದ ಹಿಡಿದು ರಷ್ಯನ್ ಹಾಗು ಫ್ರೆಂಚ್ ಕ್ರಾಂತಿಗಳ ಮೇಲಿನ ಗೀತೆಗಳವರೆಗೂ, ಭಾರತಿಯವರ ರಚನೆಗಳು ವೈವಿಧ್ಯಗಳಿಂದ ಕೂಡಿರುತ್ತಿದ್ದವು.
- ಅವರು ಏಕಕಾಲದಲ್ಲಿಯೇ ದಲಿತರ ವಿರುದ್ಧ ಸಮಾಜದ ದುರ್ವರ್ತನೆ, ಹಾಗು ಬ್ರಿಟಿಷರು ಭಾರತವನ್ನು ಆಕ್ರಮಿಸಿಕೊಳ್ಳುತ್ತಿರುವ ಬಗ್ಗೆ ಪ್ರತಿಭಟಿಸಿದರು. ಭಾರತಿ 1907ರಲ್ಲಿ ಐತಿಹಾಸಿಕ ಸೂರತ್ ಕಾಂಗ್ರೆಸ್ಸ್ ನಲ್ಲಿ ಭಾಗವಹಿಸಿದರು, ಇದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸ್ ನಲ್ಲಿ ಉಂಟಾಗಿದ್ದ ವಿಂಗಡನೆಯನ್ನು ಮತ್ತಷ್ಟು ಅಧಿಕಗೊಳಿಸಿತು.
- ತಿಲಕ್ ಹಾಗು ಅರಬಿಂದೊ ಮುನ್ನಡೆಸಿದ ತೀವ್ರವಾದಿ ಗುಂಪು ಹಾಗು ಮಂದಗಾಮಿ ಗುಂಪು ಇಲ್ಲಿ ಸಕ್ರಿಯವಾಗಿದ್ದವು. ಭಾರತಿ, V. O. ಚಿದಂಬರಂ ಪಿಳ್ಳೈ ಹಾಗು ಕಂಚಿ ವರದಾಚಾರಿಯಾರ್ ಜೊತೆಗೂಡಿ ತಿಲಕ್ ಹಾಗು ಅರಬಿಂದೊ ಅವರಿಗೆ ತಮ್ಮ ಬೆಂಬಲ ನೀಡಿದರು. ತಿಲಕ್, ಬ್ರಿಟಿಷರ ವಿರುದ್ಧ ಬಹಿರಂಗವಾಗಿಯೇ ಸಶಸ್ತ್ರ ಪ್ರತಿರೋಧವನ್ನು ಬೆಂಬಲಿಸಿದರು.
- ಭಾರತಿ ತಮ್ಮನ್ನು ತಾವು ಬರವಣಿಗೆ ಹಾಗು ರಾಜಕೀಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡರು. ಮದರಾಸಿನಲ್ಲಿ, ಸ್ವರಾಜ್ (ಸ್ವಾತಂತ್ರ್ಯ) ದಿವಸವನ್ನು ಆಚರಿಸುವ ಸಲುವಾಗಿ 1908ರಲ್ಲಿ, ಸಾರ್ವಜನಿಕ ಸಭೆಯನ್ನು ಆಯೋಜಿಸಿದರು. ಅವರ ವಂದೇ ಮಾತರಂ, ಎಂಥಯುಂ ಥಾಯುಂ ಹಾಗೂ ಜಯ ಭಾರತ್ ಎಂಬ ರಾಷ್ಟ್ರೀಯತಾವಾದಿ ಕವಿತೆಗಳನ್ನು ಮುದ್ರಿಸಿ ಪ್ರೇಕ್ಷಕರಿಗೆ ಉಚಿತವಾಗಿ ವಿತರಣೆ ಮಾಡಲಾಯಿತು.
- ಇವರನ್ನು ಭಾರತದ ರಾಷ್ಟ್ರಕವಿ ಎಂದು ಉಲ್ಲೇಖಿಸಲಾಗುತ್ತದೆ. ವಿ.ಒ. ಚಿದಂಬರಂ ಪಿಳ್ಳೈ ವಿರುದ್ಧ ಬ್ರಿಟಿಷರು 1908ರಲ್ಲಿ,ಹೂಡಿದ್ದ ಮೊಕದ್ದಮೆಯಲ್ಲಿ ಸಾಕ್ಷಿ ನೀಡಿದರು. ಅದೇ ವರ್ಷ, ಇಂಡಿಯಾ ನಿಯತಕಾಲಿಕದ ಮಾಲೀಕರನ್ನು ಮದರಾಸಿನಲ್ಲಿ ಬಂಧಿಸಲಾಯಿತು. ಬಂಧನಕ್ಕೆ ಒಳಗಾಗಬಹುದೆಂಬ ನಿರೀಕ್ಷೆಯಲ್ಲಿ, ಭಾರತಿ ಫ್ರೆಂಚ್ ಆಳ್ವಿಕೆಯಲ್ಲಿದ್ದ ಪಾಂಡಿಚೆರ್ರಿಗೆ ಪಾರಾಗುತ್ತಾರೆ.
- ಅಲ್ಲಿಂದ ಅವರು ಇಂಡಿಯಾ , ವಿಜಯಾ , ಒಂದು ತಮಿಳು ದಿನಪತ್ರಿಕೆ, ಬಾಲ ಭಾರತ , ಒಂದು ಆಂಗ್ಲ ಮಾಸಪತ್ರಿಕೆ, ಹಾಗು ಸೂರ್ಯೋದಯಂ , ಪಾಂಡಿಚೆರ್ರಿಯ ಒಂದು ಸ್ಥಳೀಯ ವಾರಪತ್ರಿಕೆಯನ್ನು ಸಂಪಾದಿಸಿ ಪ್ರಕಟಿಸುತ್ತಾರೆ. ಭಾರತಿಯವರ ಲೇಖನಗಳನ್ನು ನಿಗ್ರಹಿಸುವ ದೃಷ್ಟಿಯಿಂದ ಬ್ರಿಟಿಷರು ಹಣವನ್ನು ರವಾನಿಸುವುದನ್ನು ನಿಲ್ಲಿಸುವುದರ ಜೊತೆಗೆ ಪತ್ರಿಕೆಗಳಿಗೆ ಪತ್ರಗಳು ತಲುಪದಂತೆ ಮಾಡುತ್ತಾರೆ.
- ಇಂಡಿಯಾ ಹಾಗು ವಿಜಯಾ ಎರಡೂ ಪತ್ರಿಕೆಗಳನ್ನು 1909ರಲ್ಲಿ ಬ್ರಿಟಿಶ್ ಇಂಡಿಯಾದಲ್ಲಿ ಬಹಿಷ್ಕರಿಸಲಾಗಿತ್ತು. ತಮ್ಮ ಗಡಿಪಾರಿನ ಅವಧಿಯಲ್ಲಿ, ಭಾರತಿಯವರು, ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಗುಂಪಿನ ಇತರ ಹಲವು ನಾಯಕರುಗಳೊಂದಿಗೆ ಬೆರೆಯುವ ಅವಕಾಶ ಪಡೆದರು. ಉದಾಹರಣೆಗೆ ಅರಬಿಂದೊ, ಲಜಪತ್ ರಾಯ್ ಹಾಗು V.V.S. ಐಯ್ಯರು, ಇವರುಗಳು ಸಹ ಫ್ರೆಂಚರಲ್ಲಿ ಆಶ್ರಯ ಪಡೆದಿದ್ದರು.
- ಭಾರತಿ ಅರಬಿಂದೊ ಅವರ ಆರ್ಯ ನಿಯತಕಕಾಲಿಕಕ್ಕೆ ಹಾಗು ನಂತರದಲ್ಲಿ ಪಾಂಡಿಚೆರ್ರಿಯಲ್ಲಿ ಕರ್ಮ ಯೋಗಿ ನಿಯತಕಾಲಿಕದ ಸಂಪಾದನೆಗೆ ನೆರವು ನೀಡಿದರು. ಭಾರತಿ ನವೆಂಬರ್ 1918ರಲ್ಲಿ ಕಡಲೋರ್ ಸಮೀಪ ಬ್ರಿಟಿಷ್ ಇಂಡಿಯಾ ನೆಲೆಯನ್ನು ಪ್ರವೇಶಿಸಿದ್ದಕ್ಕಾಗಿ ಬಂಧನಕ್ಕೆ ಒಳಗಾಗುತ್ತಾರೆ. ಅವರನ್ನು ಕೇಂದ್ರ ಕಾರಾಗೃಹದಲ್ಲಿ ಮೂರು ವಾರಗಳ ಕಾಲ 20 ನವೆಂಬರ್ ನಿಂದ 14 ಡಿಸೆಂಬರ್ ವರೆಗೂ ಬಂಧನದಲ್ಲಿರಿಸಲಾಗುತ್ತದೆ.
- ಅದರ ಮರು ವರ್ಷ ಭಾರತಿ ಮೋಹನದಾಸ್ ಕರಮಚಂದ್ ಗಾಂಧಿಯವರನ್ನು ಭೇಟಿಯಾಗುತ್ತಾರೆ. ಅವರ ಕವನಗಳು ಪ್ರಗತಿಶೀಲ, ಸುಧಾರಣಾವಾದಿ ಮಾದರಿಯನ್ನು ಅಭಿವ್ಯಕ್ತಗೊಳಿಸುತ್ತವೆ. ಅವರ ಅಲಂಕಾರಿಕ ನಿರೂಪಣೆಗಳು ಹಾಗು ಅವರ ಪದ್ಯಗಳಲ್ಲಿನ ಚೈತನ್ಯವು ಹಲವು ಅಂಶಗಳಲ್ಲಿ ತಮಿಳು ಸಂಸ್ಕೃತಿಯನ್ನು ಸಂಕೇತಿಸುತ್ತವೆ. ಭಾರತಿಯಾರ್ ಮಹಿಳೆಯರಿಗೆ ಹೆಚ್ಚಿನ ಸ್ವಾತಂತ್ರ್ಯ ಹಾಗು ಗೌರವಕ್ಕೆ ಸಮರ್ಥನೆಯನ್ನು ನೀಡುತ್ತಾರೆ:
- ಸ್ತ್ರೀಕುಲಕ್ಕೆ ಕಳಂಕ ತರುವ
- ಹೆಡ್ಡತನವನ್ನು ನಾವು ನಾಶಮಾಡುತ್ತೇವೆ
ಜಾತಿ ವ್ಯವಸ್ಥೆಯ ವಿರುದ್ಧ ಹೋರಾಟ
[ಬದಲಾಯಿಸಿ]- ಭಾರತಿ, ಹಿಂದೂ ಸಮಾಜದಲ್ಲಿ ಜಾತಿ ವ್ಯವಸ್ಥೆಯ ವಿರುದ್ಧವೂ ಸಹ ಹೋರಾಟ ನಡೆಸಿದರು. ಒಂದು ಸಾಂಪ್ರದಾಯಿಕ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದರೂ ಸಹ, ಸ್ವತಃ ತಮ್ಮ ಜಾತಿ ಸ್ವರೂಪವನ್ನು ತ್ಯಜಿಸುತ್ತಾರೆ. ಅವರ ಪ್ರಸಿದ್ಧ ಉಕ್ತಿಯು ಈ ರೀತಿಯಾದ ಅರ್ಥವನ್ನು ನೀಡುತ್ತದೆ, 'ಜಗತ್ತಿನಲ್ಲಿ ಕೇವಲ ಎರಡೇ ಎರಡು ಜಾತಿಗಳಿವೆ: ಒಂದು ಶಿಕ್ಷಣ ಪಡೆದವರ ಜಾತಿ ಹಾಗು ಮತ್ತೊಂದು ಶಿಕ್ಷಣವಿಲ್ಲದವರ ಜಾತಿ. ಅವರು ಎಲ್ಲ ಜೀವಿಗಳನ್ನು ಸಮಾನವೆಂದು ಪರಿಗಣಿಸುತ್ತಾರೆ.
- ಇದನ್ನು ಸ್ಪಷ್ಟಪಡಿಸುವ ಸಲುವಾಗಿ ಒಬ್ಬ ಚಿಕ್ಕ ವಯಸ್ಸಿನ ಹರಿಜನದ ಹುಡುಗನಿಗೆ ಉಪನಯನ ವನ್ನು ಮಾಡಿ ಅವನನ್ನು ಬ್ರಾಹ್ಮಣನಾಗಿ ಪರಿವರ್ತಿಸುತ್ತಾರೆ. ಅವರು ಆ ಅವಧಿಯಲ್ಲಿ ಯುವ ಪೀಳಿಗೆಗೆ ಆಗಿನ ಹಿರಿಯರು ಬೋಧಿಸುತ್ತಿದ್ದ ಅನೈಕ್ಯತೆ ಉಂಟುಮಾಡುವ ಪ್ರವೃತ್ತಿಯನ್ನೂ ಸಹ ಅವರು ನಿರಾಕರಿಸಿದರು. ಅವರು, ವೇದಗಳು ಹಾಗು ಗೀತೆಯನ್ನು ಬೋಧಿಸುವಾಗ ತಮ್ಮ ವೈಯಕ್ತಿಕ ಚಿಂತನೆಗಳನ್ನು ಬೆರೆಸುತ್ತಿದ್ದ ಬೋಧಕರನ್ನು ಬಹಿರಂಗವಾಗಿ ಖಂಡಿಸುತ್ತಿದ್ದರು.
ಕಲೆ
[ಬದಲಾಯಿಸಿ]ಭಾಷೆ
[ಬದಲಾಯಿಸಿ]ಭಾರತಿ ತಮ್ಮ ಮಾತೃ ಭಾಷೆ, ತಮಿಳು ಭಾಷೆಯ ಬಗ್ಗೆ ದೃಢನಿಷ್ಠರಾಗಿದ್ದರು. ಜೊತೆಗೆ ಭಾಷೆಯ ಪರಂಪರೆಯ ಬಗ್ಗೆ ಹೆಮ್ಮೆಯನ್ನು ಹೊಂದಿದ್ದರು. ಅವರು ತೆಲುಗು, ಬೆಂಗಾಲಿ, ಹಿಂದಿ, ಸಂಸ್ಕೃತ, ಕುಟ್ಚಿ, ಫ್ರೆಂಚ್ ಹಾಗು ಆಂಗ್ಲ ಭಾಷೆಗಳನ್ನು ಒಳಗೊಂಡಂತೆ ಹಲವು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದರು. ಜೊತೆಗೆ ಆಗಾಗ ತಮಿಳಿಗೆ ಇತರ ಭಾಷೆಗಳ ಕೃತಿಗಳನ್ನು ತರ್ಜುಮೆ ಮಾಡುತ್ತಿದ್ದರು. ಅವರು ಪ್ರಾಚೀನ ಹಾಗು ಸಮಕಾಲೀನ ತಮಿಳು ಸಾಹಿತ್ಯ ಅದರಲ್ಲೂ ವಿಶೇಷವಾಗಿ ಪ್ರಾಚೀನ ಪದ್ಯಗಳ ಬಗ್ಗೆ ಅಧ್ಯಯನ ನಡೆಸಲು ಅಪಾರ ಆಸಕ್ತಿ ಹೊಂದಿದ್ದರು.
ರಾಷ್ಟ್ರೀಯತಾವಾದಿ ಸಾಹಿತ್ಯ
[ಬದಲಾಯಿಸಿ]ಭಾರತಿ ಅವರನ್ನು ಒಬ್ಬ ರಾಷ್ಟ್ರೀಯತಾವಾದಿ ಕವಿ ಎಂದು ಪರಿಗಣಿಸಲಾಗುತ್ತದೆ, ಏಕೆಂದರೆ ತಮ್ಮ ಹಲವಾರು ಪದ್ಯಗಳ ಮೂಲಕ ಜನರನ್ನು ಶ್ಲಾಘಿಸಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸೇರಲು ಹುರಿದುಂಬಿಸಿದರು. 'ಭವ್ಯವಾದ ಹಿಮಾಲಯವು ನಮ್ಮದು; ಹಾಗು ಅದಕ್ಕೆ ಹೋಲಿಕೆ ಮಾಡಲು ಈ ಭೂಮಿಯ ಮೇಲೆ ಯಾವುದೇ ವಸ್ತುವಿಲ್ಲ...ಶ್ರೇಷ್ಠ ನದಿ ಗಂಗೆ ನಮ್ಮ ನದಿ ಹಾಗು ಇದರ ಶ್ರೇಷ್ಠತೆಗೆ ಪ್ರತಿಸ್ಪರ್ಧಿಯಾಗಿ ಮತ್ತೊಂದು ನದಿ ಹುಟ್ಟಿಲ್ಲ...ಎಂದು ಬರೆಯುತ್ತಾರೆ
ಕೇವಲ ತಮ್ಮ ರಾಷ್ಟ್ರದ ಬಗ್ಗೆ ಹಿರಿಮೆಯನ್ನು ಹೊಂದುವುದರ ಬದಲು, ಸ್ವತಂತ್ರ ಭಾರತದ ಬಗ್ಗೆ ತಮ್ಮ ದೃಷ್ಟಿಕೋನದ ರೂಪ ರೇಖೆಗಳನ್ನೂ ಸಹ ಅವರು ಆ ಕಾಲದಲ್ಲಿ ನೀಡಿದರು. 'ನೀವು ಭಾರತ ಎಂದು ಹೇಳುವಾಗ ನಿಮ್ಮ ಶತ್ರುಗಳ ಬಗ್ಗೆ ನಿಮಗಿರುವ ಭಯವನ್ನು ತೊರೆಯುವಿರಿ...ನಾವು ಆಯುಧಗಳನ್ನು ತಯಾರು ಮಾಡೋಣ, ಉತ್ತಮ ಕಾಗದಗಳನ್ನು ತಯಾರಿಸೋಣ, ನಾವು ದೊಡ್ಡ ಕಾರ್ಖಾನೆಗಳನ್ನು ನಿರ್ಮಿಸೋಣ ಹಾಗು ದೊಡ್ಡ ದೊಡ್ಡ ಶಾಲೆಗಳ ನಿರ್ಮಾಣ ಮಾಡೋಣ. ನಾವು ವಿಶ್ರಾಂತಿ ಪಡೆಯುವುದಾಗಲಿ, ಮಲಗುವುದಾಗಲಿ ಮಾಡುವುದು ಬೇಡ, ನಾವು ಸತ್ಯವಾದಿಗಳಾಗಿದ್ದು ಅತ್ಯುತ್ತಮ ಕೆಲಸ ಮಾಡೋಣ...' ಭಾರತಿಯವರ ಬಲವಾದ ರಾಷ್ಟ್ರೀಯತಾವಾದಿ ಪ್ರಭಾವವು ಈ ಮೂಲಕ ವಿಶದಗೊಂಡಿದೆ:
- ஆயிரம் உண்டிங்கு சாதி,
- எனில் அன்னியர் வந்து புகலென்ன நீதி
- ನಮ್ಮಲ್ಲಿ ಸಾವಿರಾರು ಪಂಗಡಗಳಿರಬಹುದು; ಆದಾಗ್ಯೂ, ಇದು ಒಬ್ಬ ವಿದೇಶಿಗನು ಇಲ್ಲಿಗೆ ಬಂದು ನ್ಯಾಯವನ್ನು ನಮಗೆ ಬೋಧನೆ ಮಾಡುವುದು ಸಮರ್ಥನೀಯವಾಗಿಲ್ಲ.
- எனில் அன்னியர் வந்து புகலென்ன நீதி
ಸ್ವಾತಂತ್ರ್ಯ ಆಚರಿಸಲು ಬಳಸಿಕೊಳ್ಳಬಹುದಾದ ಹಾಡನ್ನು ಮೊದಲ ಬಾರಿಗೆ ಇವರು ಬರೆದರು,ಭಾರತವು ಖಚಿತವಾಗಿ ಯಾವುದೋ ಒಂದು ಹಂತದಲ್ಲಿ ಸ್ವಾತಂತ್ರ್ಯ ಗಳಿಸುತ್ತದೆಂಬ ಭರವಸೆ ಹೊಂದಿದ್ದರು. ಆದಾಗ್ಯೂ, ಭಾರತವು ಸ್ವಾತಂತ್ರ್ಯ ಗಳಿಸುವ ಮೊದಲೇ ನಿಧನರಾದರು.
ತಮಿಳು ಪದ್ಯದಲ್ಲಿ ಹೊಸ ಆವಿಷ್ಕಾರ
[ಬದಲಾಯಿಸಿ]ಭಾರತಿ, ತಮಿಳು ಪದ್ಯದಲ್ಲಿ ಹೊಸ ಶೈಲಿಯನ್ನು ಪರಿಚಯಿಸಿದವರಲ್ಲಿ ಮೊದಲಿಗರು. ಅಲ್ಲಿಯವರೆಗೂ ಪದ್ಯಗಳು ಪ್ರಾಚೀನ ತಮಿಳು ವ್ಯಾಕರಣಬದ್ಧ ಪ್ರಬಂಧ ತೋಳ್ಕಾಪ್ಪಿಯಂ ನಲ್ಲಿ ವಿವರಿಸಲಾದ ನಿಷ್ಕೃಷ್ಟ ವಾಕ್ಯ ರಚನೆಯನ್ನು ಅನುಸರಿಸಬೇಕಿತ್ತು. ಭಾರತಿ ಈ ವಾಕ್ಯ ರಚನಾ ಬಂಧನದಿಂದ ಹೊರಬಂದು ಪುದುಕವಿತೈ (ಆಧುನಿಕ ಕವಿತೆಗಳು) ಎಂಬ ಗದ್ಯ-ಪದ್ಯ ಶೈಲಿಯ ರಚನೆ ಮಾಡಿದರು.
ಧಾರ್ಮಿಕ ಹಾಗು ದಾರ್ಶನಿಕ ಸಾಹಿತ್ಯ
[ಬದಲಾಯಿಸಿ]- ಭಾರತಿ ಕಣ್ಣನ್ ಪಾಟ್ಟು ವಿನಂತಹ(ಕೃಷ್ಣನ ಗೀತೆ) ಕೃತಿಗಳ ರಚನೆ ಮಾಡಿದ್ದಾರೆ. ಇದರಲ್ಲಿ ಭಾರತಿಯವರು, ದೇವರನ್ನು, ಮಾನವತ್ವದ ಎಲ್ಲ ತೀವ್ರಾಸಕ್ತಿಗಳ ಮೂಲವೆಂದು, ಅದನ್ನು ಅತ್ಯಂತ ಪ್ರಭಾವಿ ರೀತಿಯಲ್ಲಿ ಚಿತ್ರಿಸಬೇಕೆಂದು ಕೋರುತ್ತಾರೆ. ಇದರಲ್ಲಿ ಪ್ರೇಮದಿಂದ ಪರಿತ್ಯಕ್ತನಾದ ಪ್ರೇಮಿ, ಒಂದು ತುಂಟ ಮಗು, ಒಂದು ಮುಗ್ಧ ಮಗು, ಹಾಗು ಒಬ್ಬ ಬುದ್ಧಿವಂತ ಶಿಕ್ಷಕನ ಪಾತ್ರಗಳೂ ಸೇರಿವೆ.
- ಅತ್ಯಂತ ವ್ಯಾಪಕವಾಗಿ ಓದಲ್ಪಡುವ ಭಾರತಿಯವರ ಗ್ರಂಥಗಳಲ್ಲಿ ಪಾಂಚಾಲಿ ಶಪಥಂ (ದ್ರೌಪದಿಯ ಶಪಥ) ಸಹ ಒಂದು. ಇದು ಭಾರತೀಯ ಗ್ರಂಥ ಮಹಾಭಾರತ ದಿಂದ ತೆಗೆದುಕೊಳ್ಳಲಾದಂತಹ, ಲೋಭ, ದುರಭಿಮಾನ ಹಾಗು ಧರ್ಮಶೀಲತೆಯ ಬಗೆಗಿನ ಒಂದು ಕಾವ್ಯಾತ್ಮಕ ಹಾಗು ಭಾಗಶಃ-ರಾಜಕೀಯತೆಯ ಪ್ರತಿಬಿಂಬವಾಗಿದೆ ಹಾಗು ಕುಯಿಲ್ ಪಾಟ್ಟು (ಕೋಗಿಲೆಯ ಗಾನ), ಕವಿಯು ತಮ್ಮ ಅಚ್ಚುಮೆಚ್ಚಿನ ಬರಹಗಾರ ಶೆಲ್ಲಿಯ ಗೌರವಾರ್ಥವಾಗಿ ರಚಿಸಿದ ಹಾಡುಗಬ್ಬ ಪದ್ಯಗುಚ್ಛವಿದೆ.
ಕರ್ನಾಟಕ ಶಾಸ್ತ್ರೀಯ ಸಂಗೀತ ರಚನೆಗಳು
[ಬದಲಾಯಿಸಿ]- ಭಾರತಿ, ಪ್ರೇಮ, ಭಕ್ತಿ ಮುಂತಾದವುಗಳ ಮೇಲೆ ತಮಿಳಿನಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಕೃತಿಗಳನ್ನು ರಚಿಸಿದ್ದಾರೆ. ಅವರು ತಮ್ಮ ರಚನೆಗಳನ್ನು ಸಂಗೀತಕ್ಕೆ ಅನುಸಾರವಾಗಿ ಸಂಯೋಜನೆ ಮಾಡಿದ್ದಾರೆ, ಹಾಗು ಇವುಗಳನ್ನು ಇಂದಿಗೂ ಹಲವಾರು ರಾಗಗಳಲ್ಲಿ ಹಾಡಬಹುದು. ಭಾರತ ದೇವಿಯಿನ್ ತಿರು ದಶಾಂಗಂ ನಲ್ಲಿ ಅವರು ಹತ್ತು ವಿವಿಧ ರಾಗಗಳನ್ನು ಬಳಸಿ ರಚನೆ ಮಾಡಿದ್ದಾರೆ.
- ಅವರ ದೇಶಭಕ್ತಿ ಗೀತೆಗಳು ರಾಷ್ಟ್ರೀಯತೆ, ಭಾರತದ ಐಕ್ಯತೆ, ಮನುಷ್ಯ ಸಮಾನತೆಗೆ ಹೆಚ್ಚು ಒತ್ತು ನೀಡುತ್ತವೆ; ಅಲ್ಲದೇ ತಮಿಳು ಭಾಷೆಯ ಹಿರಿಮೆ, ಜಾನಪದ ಧಾಟಿಗಳಿಗೆ ಹೊಂದಿಕೆಯಾಗುವಂತೆ ರಚನೆಯಾಗಿರುತ್ತವೆ. ಹಲವಾರು ರಾಜಕೀಯ ಸಭೆಗಳಲ್ಲಿ ಇವುಗಳನ್ನು ಖುದ್ದು ತಾವೇ ಹಾಡುತ್ತಿದ್ದರು. ಅವರ ಬಹುತೇಕ ಹಾಡುಗಳು ತಮಿಳು ಭಾಷೆಯಲ್ಲಿರುವುದರ ಜೊತೆಗೆ, ಭಾರತಿ ಎರಡು ಹಾಡುಗಳನ್ನು ಸಂಪೂರ್ಣ ಸಂಸ್ಕೃತದಲ್ಲಿ ರಚಿಸಿದ್ದಾರೆ.
- ಸಂಗೀತ ವಿಷಯಂ (ಸಂಗೀತದ ವಿಷಯಗಳು) ಎಂಬ ಲೇಖನದಲ್ಲಿ, ಭಾರತಿಯಾರ್, ತ್ರಿತತ್ವದಲ್ಲಿ ಹಾಡುಗಳನ್ನು ಹಾಡುತ್ತಿದ್ದ ಸಂಗೀತಗಾರರನ್ನು ಖಂಡಿಸಿದರು. ಪಟ್ನಂ ಸುಬ್ರಮಣಿಯ ಐಯ್ಯರ್ ಹಾಗು ಇತರರು ಅರ್ಥ ತಿಳಿಯದೆ ಹಾಡನ್ನು ಹಾಡುತ್ತಿದ್ದರು, ಏಕೆಂದರೆ ಹಾಡುಗಳು ಸಂಸ್ಕೃತ ಅಥವಾ ತೆಲುಗು ಭಾಷೆಯಲ್ಲಿರುತ್ತಿದ್ದವು. ಸರಿಯಾದ ಅರ್ಥ ತಿಳಿಯದೆ, ಹಾಡುಗಾರರು ಹಾಡಿಗೆ ಸರಿಯಾದ ಭಾವ ತುಂಬಲು ಅಸಮರ್ಥರೆಂದು ಅವರು ಉದಾಹರಿತವಾಗಿ ಉಲ್ಲೇಖಿಸಿದರು.
- ಭಾರತಿ ತಮ್ಮ ಹಲವಾರು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಆದಾಗ್ಯೂ ಅವರ ಎಲ್ಲ ಹಾಡುಗಳನ್ನು ಪುನರ್ವಶಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಪ್ರಸಕ್ತ ಕರ್ನಾಟಕ ಶಾಸ್ತ್ರೀಯ ಪ್ರಾಕಾರದಲ್ಲಿ ಜನಪ್ರಿಯವಾಗಿರುವ ಭಾರತಿ ಅವರ ಕೆಲವು ಅತ್ಯಂತ ಜನಪ್ರಿಯ ಹಾಡುಗಳಲ್ಲಿ: ತೀರಾಥ ವಿಳಯಾಟ್ಟು ಪಿಳ್ಳೈ , ಚಿನ್ನಂಚಿರು ಕಿಲಿಯೇ (ಭೈರವಿ ರಾಗದಲ್ಲಿ ಸ್ವತಃ ಸಂಯೋಜನೆ ಮಾಡಿದ್ದಾರೆ, ಆದರೆ ಇದು ರಾಗಮಾಲಿಕ ರಾಗದಲ್ಲಿ ಜನಪ್ರಿಯವಾಗಿದೆ), ಸುತ್ತುಂ ವಿಳಿ , ತಿಕ್ಕು ಥೆರಿಯಾಥ , ಸೆಂಥಮಿಳ್ ನಾಡೆನುಂ ಹಾಗು ಪಾರುಕ್ಕುಲೇ ನಲ್ಲ ನಾಡು ಸೇರಿವೆ.
ಪತ್ರಿಕೋದ್ಯಮ
[ಬದಲಾಯಿಸಿ]ಪತ್ರಿಕೋದ್ಯಮಿಯಾಗಿ, ತಮ್ಮ ದಿನಪತ್ರಿಕೆಗಳಲ್ಲಿ ವಿಕಟಚಿತ್ರಣ ಹಾಗು ರಾಜಕೀಯ ವ್ಯಂಗ್ಯಚಿತ್ರಗಳನ್ನು ಪರಿಚಯಿಸಿದವರಲ್ಲಿ ಭಾರತಿಯವರು ಭಾರತದಲ್ಲೇ ಮೊದಲಿಗರು. ಇವುಗಳು ವಿಡಂಬನಾಶೀಲವಾಗಿರುವುದರ ಜೊತೆಗೆ ಕೋಪದಲ್ಲಿ ಕೈಯಿಂದ ಬರೆಯಲಾದ ಸಚಿತ್ರ ವಿವರಣೆಯಾಗಿವೆ. ಇವುಗಳು ಅವರು ಪ್ರಭಾವಿತರಾದ ಥಾಮಸ್ ನಾಸ್ಟ್ ರ ಚಿತ್ರಗಳನ್ನು ಬಹಳವಾಗಿ ಆಧರಿಸಿವೆ. ಅವರು ಸ್ವದೇಶಮಿತ್ರನ್ , ಇಂಡಿಯಾ , ವಿಜಯಾ ಹಾಗು ಬಾಲ ಭಾರತಮ್ ನಂತಹ ಹಲವಾರು ನಿಯತಕಾಲಿಕಗಳನ್ನು ಸಂಪಾದಿಸಿ ಪ್ರಕಟಿಸಿದರು.
ಸಾಹಿತ್ಯಕ ಕೃತಿ
[ಬದಲಾಯಿಸಿ]ಭಾರತಿಯವರು ಬಹಳಷ್ಟು ಕೃತಿಗಳನ್ನು ರಚಿಸಿದ್ದಾರೆ; ಹಾಗು ತಮ್ಮ ಅಲ್ಪ ಜೀವಿತಾವಧಿಯಲ್ಲಿ ಅವರು ಹಲವಾರು ಕವನಗಳು, ಪ್ರಬಂಧಗಳು, ಗದ್ಯ-ಪದ್ಯ ಹಾಗು ಕಾದಂಬರಿಗಳನ್ನೂ ರಚಿಸಿದ್ದಾರೆ [೧] Archived 2012-01-24 ವೇಬ್ಯಾಕ್ ಮೆಷಿನ್ ನಲ್ಲಿ.. ಅವರು ಕವಿತೆಗಳನ್ನು ಸಾಂಪ್ರದಾಯಿಕವಾಗಿ ಹಾಗು ಪುದುಕವಿತೈ ಎಂಬ ತಮ್ಮ ಹೊಸ ಶೈಲಿ ಎರಡರಲ್ಲೂ ರಚಿಸಿದ್ದಾರೆ. ಅವರ ರಚನೆ ಗಳನ್ನು ಈ ಕೆಳಕಂಡಂತೆ ಸಂಪೂರ್ಣವಾಗಿ ವಿಂಗಡಣೆ ಮಾಡಬಹುದು.
- ಆತ್ಮಚರಿತ್ರೆ (சுய சரிதை)
- ದೇಶಭಕ್ತಿ ಗೀತೆಗಳು(தேசிய கீதங்கள்)
- ತಾತ್ತ್ವಿಕ ಗೀತೆಗಳು (ஞானப்பாடல்கள்)
- ಬಹುಮುಖ ಗೀತೆಗಳು (பல்வகைப் பாடல்கள்)
- ಭಕ್ತಿ ಗೀತೆಗಳು (பக்திப் பாடல்கள்)
- ಗೀತೆಯ ಮೇಲೆ ವ್ಯಾಖ್ಯಾನ (பகவத் கீதை முன்னுரை)
- ಕಣ್ಣನ್ ಹಾಡು, ಕುಯಿಲ್ ಹಾಡು (கண்ணன் பாட்டு, குயில் பாட்டு)
- ಪಾಂಚಾಲಿಯ ಶಪಥ(பாஞ்சாலி சபதம்)
- ಚಂದ್ರಿಕಳ ಕಥೆ (சந்திரிகையின் கதை) (ಒಂದು ಅಪೂರ್ಣ ಕಾದಂಬರಿ)
- ಪಾಪಾ ಪಾಟ್ಟು(பாப்பாப் பாட்டு) (ಶಿಶು ಗೀತೆ)
- ನೇತಾರರು
ಅನುವಾದಗಳು
[ಬದಲಾಯಿಸಿ]ಕುಯಿಲ್ ಪಾಟ್ಟು - ಷುಜೊ ಮತ್ಸುನಾಗ ಇದನ್ನು ಜಪಾನಿ ಭಾಷೆಗೆ ತರ್ಜುಮೆ ಮಾಡಿದ್ದಾರೆ (8 ಅಕ್ಟೋಬರ್ 1983)
ಮರಣ
[ಬದಲಾಯಿಸಿ]- ಭಾರತಿಯವರ ಆರೋಗ್ಯವು ಬಂಧನಗಳಿಂದ ತೀವ್ರವಾಗಿ ಹದಗೆಟ್ಟಿತು ಹಾಗು 1920ರ ಹೊತ್ತಿಗೆ ಅವರ ಚಳವಳಿಗಳ ಮೇಲೆ ಸಾಮಾನ್ಯ ಕ್ಷಮಾದಾನ ಆದೇಶವನ್ನು ಅಂತಿಮವಾಗಿ ತೆಗೆದುಹಾಕುವಷ್ಟರಲ್ಲೇ ಭಾರತಿಯವರು ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದರು. ಅವರು ಚೆನ್ನೈನ ಟ್ರಿಪ್ಲಿಕೇನ್‍ನಲ್ಲಿರುವ ಪಾರ್ಥಸಾರಥಿ ದೇವಾಲಯದಲ್ಲಿದ್ದ ಆನೆಯಿಂದ ತುಳಿತಕ್ಕೊಳಪಟ್ಟಿದ್ದರು. ಆ ಆನೆಗೆ ಅವರು ನಿಯಮಿತವಾಗಿ ಆಹಾರವನ್ನು ನೀಡುತ್ತಿದ್ದರು.
- ಈ ಘಟನೆಯಿಂದ ಅವರು ಪಾರಾದರೂ ಸಹ, ಕೆಲವು ತಿಂಗಳ ನಂತರ ಅವರ ಆರೋಗ್ಯವು ಕ್ಷೀಣಿಸಿತು; ಹಾಗು ಸೆಪ್ಟೆಂಬರ್ 11, 1921ರಲ್ಲಿ ಅವರು ಕಾಲನ ವಶವಾದರು. ಭಾರತಿಯವರು ಒಬ್ಬ ಜನಾನುರಾಗಿ ಕವಿಯಾಗಿದ್ದರೂ ಸಹ ಅವರ ಅಂತ್ಯಸಂಸ್ಕಾರದಲ್ಲಿ ಕೇವಲ ಹದಿನಾಲ್ಕು ಜನ ಭಾಗವಹಿಸಿದ್ದರು.[೩] ಮಹಾಕವಿ ತಮ್ಮ ಕೊನೆಯ ಭಾಷಣವನ್ನು ಈರೋಡ್ ನ ಕರುಂಗಲ್ಪಾಳ್ಯಂನಲ್ಲಿ ನೀಡಿದರು, ಮಾನವ ಅಮರ್ತ್ಯ ಎಂಬುದು ಭಾಷಣದ ವಿಷಯವಾಗಿತ್ತು.[೪]
- ತಮ್ಮ ಜೀವನದ ಅಂತಿಮ ವರ್ಷಗಳನ್ನು ಚೆನ್ನೈನ ಟ್ರಿಪ್ಲಿಕೇನ್ ನಲ್ಲಿರುವ ತಮ್ಮ ಮನೆಯಲ್ಲಿ ಕಳೆದರು [೨]. ಈ ಮನೆಯನ್ನು 1993ರಲ್ಲಿ ತಮಿಳುನಾಡು ಸರ್ಕಾರವು ಖರೀದಿಸಿ ಅದನ್ನು ನವೀಕರಿಸಿತು ಹಾಗು ಅದಕ್ಕೆ 'ಭಾರತಿಯಾರ್ ಇಲ್ಲಮ್' ಎಂದು ಹೆಸರಿಸಿತು(ಭಾರತಿಯಾರ್ ರ ಮನೆ). ರಾಷ್ಟ್ರ ಕವಿಯ ಜೀವನದ ಮೇಲೆ ಭಾರತಿ ಎಂಬ ಒಂದು ತಮಿಳು ಚಿತ್ರವನ್ನು [೩] Archived 2011-06-29 ವೇಬ್ಯಾಕ್ ಮೆಷಿನ್ ನಲ್ಲಿ. ಕೆಲ ವರ್ಷಗಳ ಹಿಂದೆ ನಿರ್ಮಿಸಲಾಯಿತು. ಈ ಕಲಾತ್ಮಕ ಚಿತ್ರವನ್ನು ಜ್ಞಾನ ರಾಜಶೇಖರನ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಸುಬ್ರಮಣ್ಯ ಭಾರತಿ ಪಾತ್ರವನ್ನು ಮರಾಠಿ ನಟ, ಸಯಾಜಿ ಶಿಂಧೆ ನಿರ್ವಹಿಸಿದ್ದಾರೆ.
ಕುಟುಂಬ
[ಬದಲಾಯಿಸಿ]ಡಾ. ರಾಜಕುಮಾರ್ ಭಾರತಿ ಅವರ ಪುತ್ರ ಹಾಗು ಸುಬ್ರಮಣ್ಯ ಭಾರತಿ ಅವರ ಮರಿಮಗ ನಿರಂಜನ್ ಭಾರತಿ, ತಮ್ಮ ಬಾಲ್ಯ ಸ್ನೇಹಿತ ವೆಂಕಟ್ ಪ್ರಭು ಅವರ ತಮಿಳು ಚಿತ್ರ ಮನ್ಕಥಾಗೆ ಒಂದು ಗೀತೆ ರಚಿಸಿದ್ದಾರೆ[೫][೬]
ಉಲ್ಲೇಖಗಳು
[ಬದಲಾಯಿಸಿ]This article includes a list of references, related reading or external links, but its sources remain unclear because it lacks inline citations. (March 2009) |
- ↑ Attar Chand The great humanist Ramaswami Venkataraman Page 12.
- ↑ "ಆರ್ಕೈವ್ ನಕಲು". Archived from the original on 2012-01-24. Retrieved 2011-02-17.
- ↑ "ಭಾರತಿಯವರ ಜೀವನ ಹಾಗು ಮರಣ". Archived from the original on 2009-02-23. Retrieved 2011-02-17.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "ಈರೋಡ್ ನಲ್ಲಿ ಅವರು ನೀಡಿದ ಕಡೆ ಭಾಷಣ". Archived from the original on 2008-04-15. Retrieved 2011-02-17.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "ಆರ್ಕೈವ್ ನಕಲು". Archived from the original on 2010-12-19. Retrieved 2011-02-17.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "ಆರ್ಕೈವ್ ನಕಲು". Archived from the original on 2011-02-06. Retrieved 2011-02-17.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help)
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಭಾರತಿಯವರ ರಚನೆಗಳು Archived 2011-02-24 ವೇಬ್ಯಾಕ್ ಮೆಷಿನ್ ನಲ್ಲಿ.
- ಜನರ ಕವಿ
- Pages using the JsonConfig extension
- CS1 errors: redundant parameter
- Articles with hCards
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Articles lacking in-text citations from March 2009
- All articles lacking in-text citations
- Commons category link is on Wikidata
- Persondata templates without short description parameter
- ತಮಿಳು ಕವಿಗಳು
- ತಮಿಳು ಕ್ರಿಯಾವಾದಿಗಳು
- ತಮಿಳು ಭಾಷೆಯ ಲೇಖಕರು
- ಭಾರತೀಯ ಸ್ವಾತಂತ್ರ್ಯ ಪ್ರತಿಪಾದಕರು
- ಭಾರತೀಯ ಕವಿಗಳು
- ಹಿಂದೂ ಕವಿಗಳು
- 1882ರಲ್ಲಿ ಜನಿಸಿದವರು
- 1921ರಲ್ಲಿ ಮರಣ ಹೊಂದಿದವರು
- ತಿರುನಲ್ವೇಲಿ
- ಟ್ಯೂಟಿಕಾರಿನ್
- ಟ್ಯೂಟಿಕಾರಿನ್ ನ ಜನರು
- ಭಾರತೀಯ ಸುಧಾರಕರು
- ಭಾರತೀಯ ಜೀವನಚರಿತ್ರಕಾರರು
- ಕವಿಗಳು
- ಸ್ವಾತಂತ್ರ್ಯ ಹೋರಾಟಗಾರರು