ವಿಷಯಕ್ಕೆ ಹೋಗು

ಲೆಪಿಡೋಸೈರನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
South American lungfish
Temporal range: Late Cretaceous to recent 72.1–0 Ma []
Conservation status
Scientific classification e
ಕ್ಷೇತ್ರ: Eukaryota
ಸಾಮ್ರಾಜ್ಯ: Animalia
ವಿಭಾಗ: ಕಾರ್ಡೇಟಾ
ವರ್ಗ: ಡಿಪ್‍ನಾಯ್
ಗಣ: ಸೆರ್‍ಯಾಟೋಡೋಂಟಿಫ಼ಾರ್ಮೀಸ್
ಕುಟುಂಬ: ಲೆಪಿಡೋಸೈರನಿಡೇ
Bonaparte, 1841
ಕುಲ: ಲೆಪಿಡೋಸೈರನ್
Fitzinger, 1837
ಪ್ರಜಾತಿ:
L. paradoxa
Binomial name
Lepidosiren paradoxa
Fitzinger, 1837
Synonyms[][][]

(Genus)

  • Amphibichthys Hogg 1841

(Species)

  • Amphibichthys paradoxus (Fitzinger 1837)
  • Lepidosiren articulata Ehlers 1894

ಲೆಪಿಡೋಸೈರನ್ ದಕ್ಷಿಣ ಅಮೆರಿಕದ ಕೆಲವೆಡೆ ಸಿಹಿನೀರಿನ ಮೂಲಗಳಲ್ಲಿ ವಾಸಿಸುವ ಫುಪ್ಫುಸ ಮೀನು. ಲೆಪಿಡೋಸೈರನ್ ಪ್ಯಾರಾಡೋಕ್ಸಾ, ಅಮೇಜಾನ್ ಮತ್ತು ಅದರ ಉಪನದಿಗಳಲ್ಲಿ ಸಿಗುವ ಪ್ರಭೇದ.[] ಅಮೇರಿಕನ್ ಮಡ್-ಫಿಶ್ ಎಂದೂ ಕರೆಯಲ್ಪಡುತ್ತದೆ.[] ಪರುಗ್ವೆಯ ಚಾಕೋ ನದಿ ಮತ್ತು ಅದರ ಸುತ್ತುಮುತ್ತಲಿನ ಆಳವಿಲ್ಲದ ಮಣ್ಣು ಮಿಶ್ರಿತ ನೀರಿನ ಮೂಲಗಳಲ್ಲಿ ಇದರ ಸಂಖ್ಯೆ ಜಾಸ್ತಿ. ಅಲ್ಲಿಯ ಜನರು ಇದನ್ನು ಒಮ್ಮೊಮ್ಮೆ ಆಹಾರವಾಗಿ ಸೇವಿಸುವುದುಂಟು.

ರೂಪದಲ್ಲಿ ಇದು ಈಲ್ ಮೀನುಗಳನ್ನು ಹೋಲುತ್ತದೆ. ಡಿಪ್ನೊಯಿ ಉಪವರ್ಗಕ್ಕೆ ಸೇರಿದೆ. ಡಿಪ್ನಿಯೂಮ ಸರಣಿಯ ಲೆಪಿಡೋಸೈರನಿಡೇ ಇದರ ಕುಟುಂಬ. ಸುಮಾರು 2 ಮೀ. ಉದ್ದ ಕೂಡ  ಬೆಳೆಯುತ್ತದೆ. ಈ ಹೊಟ್ಟೆಬಾಕ ಮಾಂಸಾಹಾರಿಗೆ ಆಹಾರ ಮೀನು, ಮೃದ್ವಂಗಿಗಳು, ಕಠಿಣ ಚರ್ಮಿಗಳು ಹಾಗೂ ಕೆಲವೊಮ್ಮೆ ಸಸ್ಯಗಳು ಕೂಡ.

ದೇಹರಚನೆ

[ಬದಲಾಯಿಸಿ]

ಲೆಪಿಡೋಸೈರನ್‌ನ ಚರ್ಮದ ಮೇಲೆಲ್ಲ ಬಲು ಸಣ್ಣದಾದ ಚಕ್ರಜ ಶಲ್ಕಗಳಿವೆ. ಗಿಡ್ಡ ಹಾಗೂ ಕಿರಿದಾದ ಒಂದೊಂದು ಜೊತೆ ಭುಜದ ರೆಕ್ಕೆಗಳು, ಸೊಂಟದ ಈಜು ರೆಕ್ಕೆಗಳು ಮತ್ತು ಬಾಲದ ಈಜು ರೆಕ್ಕೆ ಈ ಮೀನಿಗೆ ಈಸಲು ನೆರವಾಗುತ್ತವೆ. ಕೆಲವು ಮೂಳೆ ಮೀನುಗಳಲ್ಲಿರುವಂತೆ ಬಾಲದ ಈಜು ರೆಕ್ಕೆ ಅರ್ಧಚಂದ್ರಾಕಾರದಲ್ಲಿದೆ. ಸ್ಪರ್ಶ ಸಂವೇದನೆಯಲ್ಲಿ ಜೋಡಿ ರೆಕ್ಕೆಗಳ ತುದಿ ಸಹಾಯಕ. ದೃಷ್ಟಿ ಕೊಂಚ ಮಂದವಾಗಿದ್ದರೂ ವಾಸನೆ ಗ್ರಹಿಕೆ ಮತ್ತು ರುಚಿ ಸಂವೇದನೆ ಅತ್ಯುತ್ತಮವಾಗಿವೆ. ದೇಹದ ಎರಡೂ ಬದಿಗಳಲ್ಲಿರುವ ಪಾರ್ಶ್ವಸಂವೇದನಾ ವ್ಯವಸ್ಥೆ ನೀರಿನಲ್ಲಾಗುವ ಉಷ್ಣತೆ, ಒತ್ತಡ ಇತ್ಯಾದಿಗಳ ಅತಿ ಸೂಕ್ಷ್ಮ ಬದಲಾವಣೆಗಳನ್ನೂ ಗ್ರಹಿಸಬಲ್ಲದು.

ಅವಯಸ್ಕ ಲೆಪಿಡೋಸೈರನ್ ಕಪ್ಪು ಹಿನ್ನೆಲೆಯಲ್ಲಿ ಸುವರ್ಣ ಬಣ್ಣವನ್ನು ಹೊಂದಿರುತ್ತದೆ; ವಯಸ್ಕ ಲೆಪಿಡೋಸೈರನ್‍ನಲ್ಲಿ ಈ ಬಣ್ಣ ಮಾಸಿ ಕಂದು ಅಥವಾ ಬೂದು ಬಣ್ಣದ್ದಾಗಿ ಕಾಣಿಸುತ್ತದೆ.[]

ಎಲ್ಲ ಮೀನುಗಳಂತೆ ಲೆಪಿಡೋಸೈರನ್‌ನಲ್ಲೂ ಉಸಿರಾಟ ಕಿವಿರುಗಳ ಮೂಲಕ ನಡೆಯುತ್ತದೆ.[] ಇವುಗಳಿಗೆ ಮೇಲು ಮುಚ್ಚಳ ಉಂಟು. ಕಿವಿರುಗಳ ಜೊತೆಗೆ ಎರಡು ಫುಪ್ಫುಸಗಳೂ ಇವೆ. ಇವು ಜೀರ್ಣಾಂಗ ವ್ಯೂಹದ ಮೇಲ್ಭಾಗದಲ್ಲಿದ್ದು ಅನ್ನನಾಳದ ಕೆಳಭಾಗದಲ್ಲಿ ತೆರೆದುಕೊಳ್ಳುತ್ತದೆ. ಇತರ ಭೂಚರಿಗಳಲ್ಲಿರುವಂತೆ ಫುಪ್ಫುಸಗಳಲ್ಲಿ ಅಸಂಖ್ಯಾತ ಆಲ್ವಿಯೋಲೈಗಳಿವೆ. ಉಸಿರಾಟದ ವೇಳೆ ಈ ಮೀನು ನೀರಿನ ಮೇಲ್ಭಾಗಕ್ಕೆ ಈಸುತ್ತ ನೀರಿನ ಮಟ್ಟಕ್ಕೆ ತನ್ನ ಮೂಲೆಯನ್ನು ತಾಗಿಸಿ, ಅಗಲವಾಗಿ ಬಾಯಿ ಕಳೆದು, ಗಾಳಿ ಎಳೆದುಕೊಳ್ಳುತ್ತದೆ. ಇದು ಕೊಯೆನಾ ಎಂಬ ರಂಧ್ರದ ಮೂಲಕ ನಾಸಿಕಕವಾಟ ಸೇರಿ, ಅಲ್ಲಿಂದ ಫುಪ್ಫುಸದೊಳಕ್ಕೆ ಹೋಗುತ್ತದೆ. ಗಾಳಿಯನ್ನು ಒಳಗೆಳೆದುಕೊಳ್ಳುವ ಸಮಯದಲ್ಲಿ ವಿಚಿತ್ರ ಶಬ್ದ ಹೊರಡುತ್ತದೆ.

ಹೃದಯದಲ್ಲಿ ಅಸಮರ್ಪಕವಾಗಿ ವಿಭಾಗವಾಗಿರುವ ತಲಾ ಒಂದು ಹೃತ್ಕರ್ಣ ಹಾಗೂ ಹೃತ್ಕುಕ್ಷಿ ಇವೆ. ಮೂತ್ರಪಿಂಡಗಳು ಉದ್ದವಾಗಿದ್ದು ಒಂದೊಂದರಿಂದಲೂ ಸುಮಾರು 2 ಮೀ. ಉದ್ದವಿರುವ ಮೂತ್ರನಾಳಗಳು ಹೊರಡುತ್ತವೆ.

ಸಂತಾನೋತ್ಪತ್ತಿ

[ಬದಲಾಯಿಸಿ]

ಸಂತಾನೋತ್ಪತ್ತಿಯ ವೇಳೆ ಲೆಪಿಡೋಸೈರನ್ ಲಿಂಗ ದ್ವಿರೂಪತೆಯನ್ನು ಪ್ರದರ್ಶಿಸುತ್ತದೆ. ಗಂಡು ಮೀನಿನ ಸೊಂಟದ ಈಸು ರೆಕ್ಕೆಗಳ ಮೇಲೆ ಕುಚ್ಚಿನಂಥ ಶಾಖೆಗಳು ಕಾಣಿಸುತ್ತವೆ. ಅವುಗಳಲ್ಲಿರುವ ಸೂಕ್ಷ್ಮ ರಕ್ತನಾಳಗಳು ರಕ್ತದಲ್ಲಿರುವ ಆಮ್ಲಜನಕವನ್ನು ನೀರಿಗೆ ಬಿಡುಗಡೆ ಮಾಡಿ ತನ್ಮೂಲಕ ಬೆಳೆಯುತ್ತಿರುವ ಮರಿಗಳ ಉಸಿರಾಟಕ್ಕೆ ಸಹಾಯ ಮಾಡುತ್ತವೆ. ಗಂಡು ಮತ್ತು ಹೆಣ್ಣು ಮೀನುಗಳೆರಡೂ ಸೇರಿ ಮಣ್ಣಿನಲ್ಲಿ ಲಂಬವಾದ ಗೂಡನ್ನು ತೋಡುತ್ತವೆ. ಕೆಳಗೆ ಇಳಿದಂತೆ ಈ ಗೂಡು ಕ್ರಮೇಣ ಮಣ್ಣಿನ ಮಟ್ಟಕ್ಕೆ ಸಮಾಂತರವಾಗುತ್ತದೆ. ಹೆಣ್ಣು ಮೀನು ಸುಮಾರು 5000 ಮೊಟ್ಟೆಗಳನ್ನಿಡುತ್ತದೆ. ಈ ಮೊಟ್ಟೆಗಳನ್ನೂ ಮುಂದಕ್ಕೆ ಮರಿಗಳನ್ನೂ ಕಾಪಾಡುವ ಜವಾಬ್ದಾರಿ ಗಂಡಿನದು. ಸಣ್ಣ ಮರಿಗಳು ಗೋಡೆಯ ಮೇಲೆ ತೆವಳಿಕೊಂಡು ಗೂಡಿನ ಮೇಲ್ಭಾಗದಲ್ಲಿ ತಲೆ ಮೇಲಾಗಿ ಸುಮಾರು ಒಂದರಿಂದ ಎರಡು ತಿಂಗಳು ಲಂಬವಾಗಿ ಜೋತುಬಿದ್ದುಕೊಂಡಿರುತ್ತವೆ. ಬೆಳೆವಣಿಗೆಯ ಮೊದಲೆರಡು ತಿಂಗಳು ನಾಲ್ಕು ಜೊತೆ ಹೊರಕಿವಿರುಗಳ ಮುಖಾಂತರ ಉಸಿರಾಟ ನಡೆಯುತ್ತದೆ. ಕ್ರಮೇಣ ಅವು ನಶಿಸಿ ಒಳಕಿವಿರು ಮತ್ತು ಶ್ವಾಸಕೋಶಗಳು ಉಸಿರಾಟದಲ್ಲಿ ಭಾಗವಹಿಸುತ್ತವೆ.

ಗ್ರೀಷ್ಮ ನಿದ್ರೆ

[ಬದಲಾಯಿಸಿ]

ಬರಗಾಲ ಮತ್ತು ಬೇಸಗೆಯಲ್ಲಿ ನದಿಯ ನೀರು ಬತ್ತಿದಾಗ ಲೆಪಿಡೋಸೈರನ್ ಮಣ್ಣಿನೊಳಗೆ ಬಿಲ ಕೊರೆದು ಪುನಃ ನೀರಿನ ಮಟ್ಟ ಏರುವ ತನಕವೂ ಅದರಲ್ಲಿಯೇ ತನ್ನ ಬದುಕನ್ನು ಕಳೆಯುತ್ತದೆ. ಇದನ್ನು ‘ಗ್ರೀಷ್ಮ ನಿದ್ರೆ’ ಅಥವಾ ‘ಗ್ರೀಷ್ಮ ನಿಶ್ಚೇಷ್ಟತೆ’ ಎನ್ನುತ್ತಾರೆ. ಸ್ನಾಯುಗಳಲ್ಲಿ ಸಂಗ್ರಹವಾಗಿರುವ ಆಹಾರವನ್ನೇ ಈ ಶ್ರಾಯದಲ್ಲಿ ದೇಹದ ಜೈವಿಕ ಕ್ರಿಯೆಗಳಿಗೆ ಉಪಯೋಗಿಸಿಕೊಳ್ಳುತ್ತದೆ. ಸಹಜವಾಗಿಯೇ ದೇಹತೂಕದಲ್ಲಾಗುವ ಕ್ಷೀಣತೆಯನ್ನು ಗ್ರೀಷ್ಮ ನಿದ್ರೆ ಕಳೆದ ಎರಡು ತಿಂಗಳೊಳಗೆ ಸರಿದೂಗಿಸಿಕೊಳ್ಳುತ್ತದೆ.

‘ಅಮೆರಿಕದ ಫುಪ್ಫುಸ ಮೀನು’ ಎಂದೇ ಪ್ರಸಿದ್ಧವಾಗಿರುವ ಲೆಪಿಡೋಸೈರನ್‌ನ ಸಂಖ್ಯೆ ಈಗ ತೀರ ಕಡಿಮೆಯಾಗಿದೆ. ಮೀನು ಹಾಗೂ ಉಭಯಜೀವಿಗಳೆರಡರ ಲಕ್ಷಣಗಳೂ ಇದಕ್ಕಿವೆ ಎಂದೇ ಇದಕ್ಕೆ ಪ್ರಾಣಿ ಸಾಮ್ರಾಜ್ಯದಲ್ಲಿ ಒಂದು ವಿಶಿಷ್ಟ ಸ್ಥಾನ ಇದೆ.

ಉಲ್ಲೇಖಗಳು

[ಬದಲಾಯಿಸಿ]
  1. "Lepidosiren paradoxa Fitzinger 1837 (South American lungfish)". PBDB.
  2. Frederico, R.G. (2022). "Lepidosiren paradoxa". IUCN Red List of Threatened Species. 2022: e.T49830702A159889457. doi:10.2305/IUCN.UK.2022-2.RLTS.T49830702A159889457.en. Retrieved 9 February 2023.
  3. "Part 7- Vertebrates". Collection of genus-group names in a systematic arrangement. Archived from the original on 5 ಅಕ್ಟೋಬರ್ 2016. Retrieved 30 June 2016.
  4. Haaramo, Mikko (2007). "Ceratodiformes – recent lungfishes". Mikko's Phylogeny Archive. Retrieved 3 July 2016.
  5. Froese, R.; Pauly, D. (2017). "Lepidosirenidae". FishBase version (02/2017). Retrieved 18 May 2017.
  6. Froese, Rainer; Pauly, Daniel (eds.) (2014). "Lepidosiren paradoxa" in FishBase. April 2014 version.
  7. Ernst Heinrich Philipp August Haeckel; Edwin Ray Lankester; L. Dora Schmitz (1892). The History of Creation, Or, The Development of the Earth and Its Inhabitants by the Action of Natural Causes: A Popular Exposition of the Doctrine of Evolution in General, and of that of Darwin, Goethe, and Lamarck in Particular : from the 8. German Ed. of Ernst Haeckel. D. Appleton. p. 422. page 289
  8. Animal-world: South American Lungfish.
  9. Bruton, Michael N. (1998). Paxton, J.R.; Eschmeyer, W.N. (eds.). Encyclopedia of Fishes. San Diego: Academic Press. p. 70. ISBN 0-12-547665-5.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: