ಲಾಲ್ಚಂದ್ ಹಿರಾಚಂದ್
ಲಾಲ್ಚಂದ್ ಹೀರಾಚಂದ್ ದೋಷಿ (೨೪ ಅಕ್ಟೋಬರ್ ೧೯೦೪ - ೧೯೯೩) ವಾಲ್‌ಚಂದ್ ಗ್ರೂಪ್‍ನ ಹೆಸರಾಂತ ಕೈಗಾರಿಕೋದ್ಯಮಿ, ಲೋಕೋಪಕಾರಿ ಮತ್ತು ಜೈನ ಸಾಮಾಜದ ನಾಯಕರಾಗಿದ್ದರು. [೧]
ಅವರು ಹೀರಾಚಂದ್ ದೋಷಿಯವರ ಎರಡನೆಯ ಪತ್ನಿಯ ಕಿರಿಯ ಮಗ, ಮೊದಲ ಪತ್ನಿಯ ಮಗನಾದ ವಾಲ್‌ಚಂದ್ ಹೀರಾಚಂದ್ ಅವರ ಮಲ ಸಹೋದರ. ಅವರು ಮಹಾರಾಷ್ಟ್ರದ ಸೋಲಾಪುರದಲ್ಲಿ ಗುಜರಾತಿ ಮೂಲದ ಜೈನ ಕುಟುಂಬದಲ್ಲಿ ಜನಿಸಿದರು. [೨] [೩] ಅವರ ಇತರ ಸಹೋದರು ಗುಲಾಬ್‌ಚಂದ್ ಹೀರಾಚಂದ್ ಮತ್ತು ರತನ್‌ಚಂದ್ ಹೀರಾಚಂದ್ . [೨]
ಅವರು ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪದವಿ ಪಡೆದರು. ೧೨ ನವೆಂಬರ್ ೧೯೨೬ರಂದು ಲಂಡನ್‌ನ ಮಿಡಲ್ ಟೆಂಪಲ್ [೪] ಗೆ ಸೇರಿದರಾದರೂ ೮ ನವೆಂಬರ್ ೧೯೨೮ರಂದು ನ್ಯಾಯಾಲಯದಲ್ಲಿ ವಾದಮಾಡುವ ಅವಕಾಶ ದೊರೆಯುವ ಮುನ್ನವೇ ತಮ್ಮ ವಿದ್ಯಾಭ್ಯಾಸವನ್ನು ಸ್ಥಗಿತಗೊಳಿಸಿದರು. ಅವರು ಜೂನ್ ೧೯೩೧ರಲ್ಲಿ ಲಲಿತಾಬಾಯಿಯವರನ್ನು ವಿವಾಹವಾದರು. ಅವರಿಗೆ ಮೂವರು ಪುತ್ರರು ಮತ್ತು ಒಬ್ಬಳು ಮಗಳು ಇದ್ದರು. [೧]
ಮುಂದೆ ಅವರು ತಮ್ಮ ಸಹೋದರ ವಾಲ್‌ಚಂದ್‌ರೊಂದಿಗೆ ತಮ್ಮ ಕುಟುಂಬಕ್ಕೆ ಸೇರಿದ ಸಂಸ್ಥೆಗಳಾದ ದಿ ಸಿಂಧಿಯಾ ಸ್ಟೀಮ್ ನ್ಯಾವಿಗೇಷನ್ ಕಂಪನಿ ಲಿಮಿಟೆಡ್, ವಾಲ್‌ಚಂದನಗರ್ ಇಂಡಸ್ಟ್ರೀಸ್, ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್, ರಾವಲ್‌ಗಾಂವ್ ಶುಗರ್, ಹಿಂದೂಸ್ತಾನ್ ಕನ್ಸ್ಟ್ರಕ್ಷನ್ ಕಂಪನಿ, ಪ್ರೀಮಿಯರ್ ಆಟೋಮೊಬೈಲ್ಸ್, ಇತ್ಯಾದಿ ಸಂಸ್ಥೆಗಳಲ್ಲಿ ದುಡಿದರು.[೨] ನಂತರ ಅವರು ಇಂಡಿಯನ್ ಮರ್ಚೆಂಟ್ಸ್ ಛೇಂಬರ್ ಮತ್ತು ಇತರ ವ್ಯಾಪಾರಿ ಸಂಸ್ಥೆಗಳ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು.
ಅವರು ೧೯೭೨ ರಿಂದ ೧೯೮೩ರವರೆಗೆ ಅಖಿಲ ಭಾರತ ದಿಗಂಬರ್ ಜೈನ ತೀರ್ಥಕ್ಷೇತ್ರ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. ಹಲವಾರು ದತ್ತಿ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿದ್ದರು. [೧] ಅವರ 'ದಿ ಇಂಡಿಯನ್ ಎಪಿಕ್ - ರಾಮಾಯಣ' ಎನ್ನುವ ರಾಮಾಯಣದ ಬಗೆಗನ ಪುಸ್ತಕ ಅಪಾರ ಮೆಚ್ಚುಗೆಯನ್ನು ಪಡೆದಿದೆ. [೧]
ಅವರು ೧೯೩೯ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಾಂಬೆ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾದರು [೫] ಸ್ವಾತಂತ್ರ್ಯದ ನಂತರ ೧೯೫೨ ರಿಂದ ೧೯೫೮ರವರೆಗೆ ರಾಜ್ಯಸಭೆಯ ಸದಸ್ಯರಾಗಿದ್ದರು [೬]
ಅವರು ಮೆಕಾನಿಕಲ್ ಇಂಜಿನಿಯರ್ಸ್ ಅಸೋಸಿಯೇಶನ್ (ಭಾರತ), ಬಾಂಬೆಯ ಅಧ್ಯಕ್ಷರಾಗಿ ೧೯೬೪-೬೫ ಅವಧಿಗೆ ಆಯ್ಕೆಯಾಗಿದ್ದರು.
ಕ್ರೀಡಾಭಿಮಾನಿಯಾಗಿದ್ದ ಅವರು, ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ, ವಿಲ್ಲಿಂಗ್ಡನ್ ಸ್ಪೋರ್ಟ್ಸ್ ಕ್ಲಬ್ ಮತ್ತು ಇತರ ಕ್ರೀಡಾಸಂಸ್ಥೆಗಳ ಸದಸ್ಯರಾಗಿದ್ದರು. ಜೊತೆಗೆ, ಅವರಿಗೆ ಗಾಲ್ಫ್ ಆಟದಲ್ಲಿ ಹೆಚ್ಚು ಆಸಕ್ತಿಯಿತ್ತು. ಅವರು ಗಾಲ್ಫ್‌ನಲ್ಲಿ ಡನ್‌ಲಪ್ ಟ್ರೋಫಿಯನ್ನು ಗೆದ್ದಿದ್ದಾರೆ. ಟೆನಿಸ್, ಬ್ಯಾಡ್ಮಿಂಟನ್ ಮತ್ತು ಬ್ರಿಡ್ಜ್ ಆಟಗಳಲ್ಲೂ ಅವರಿಗೆ ಆಸಕ್ತಿಯಿತ್ತು. ವಾಣಿಜ್ಯ ಪೈಲಟ್ ಪರವಾನಗಿಯನ್ನು ಹೊಂದಿದ್ದರು. [೭]
ಅವರು ತಮ್ಮ ಪುತ್ರರನ್ನು ಅಗಲಿ ಅಕ್ಟೋಬರ್ ೧೯೯೩ರಲ್ಲಿ ನಿಧನರಾದರು. [೧] ಅವರ ಪುತ್ರರಾದ ವಿನೋದ್ ದೋಶಿ, ಚಕೋರ್ ಎಲ್. ದೋಶಿ ಮತ್ತು ಇತರರು ವಾಲ್‌ಚಂದನಗರ್ ಇಂಡಸ್ಟ್ರೀಸ್ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ವಾರಸುದಾರರಿಲ್ಲದೇ ವಾಲ್‍ಚಂದ್ ಅವರು ನಿಧನರಾಗಿ, ಕೌಟುಂಬಿಕ ಉದ್ಯಮಗಳ ಭಾಗವಾದ ನಂತರ ಇತರ ಉದ್ಯಮಗಳು ಗುಲಾಬ್‍ಚಂದ್ ಅವರ ಪುತ್ರರಿಗೆ ಸೇರಿತು.
ಅವರು ವಾಲ್‌ಚಂದ್ ಗುಂಪು ನಡೆಸುತ್ತಿರುವ ವಿವಿಧ ಶಾಲೆ, ಕಾಲೇಜುಗಳು ಮತ್ತು ಆಸ್ಪತ್ರೆಗಳ ಧರ್ಮದರ್ಶಿಯಾಗಿದ್ದರು.
ವ್ಯಾಪಾರ ಹಾಗೂ ಉದ್ಯಮ ಕ್ಷೇತ್ರದಲ್ಲಿನ ಕೊಡುಗೆಗಾಗಿ ಅವರಿಗೆ ೧೯೯೨ ರಲ್ಲಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತು.
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ ೧.೨ ೧.೩ ೧.೪ Jain Samaj – Seth Lalchand Hirachand
- ↑ ೨.೦ ೨.೧ ೨.೨ Progressive Jains of India – Satish Kumar Jain – Google Books
- ↑ Business Legends – Gita Piramal – Google Books
- ↑ Sturgess, H.A.C. (1949). Register of Admissions to the Honourable Society of the Middle Temple. Butterworth & Co. (Publishers) Ltd.: Temple Bar. Vol. 3, p.895.
- ↑ Markovits, Claude (2002). Indian Business and Nationalist Politics 1931–39: The Indigenous Capitalist ... By Claude Markovits. p. 123. ISBN 9780521016827.
- ↑ "Lalchand Hirachand Doshi – Member of Rajya Sabha – 1952–58". Archived from the original on 2021-10-03. Retrieved 2021-10-03.
- ↑ "Legacy". Archived from the original on 7 ಅಕ್ಟೋಬರ್ 2014. Retrieved 6 October 2014.