ವಿಷಯಕ್ಕೆ ಹೋಗು

ಯಶಪಾಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಯಶಪಾಲ್
ಭಾರತದ ವಿಜ್ಞಾನಿ, ಶಿಕ್ಷಣ ತಜ್ಞ, ಆಡಳಿಗಾರ, ಮಾತುಗಾರ ಯಶ್‌ ಪಾಲ್ ಅಥವಾ‌ ಯಶ್‌ ಪಾಲ್‌ ಸಿಂಗ್‌   ಬಗ್ಗೆ ಮಾಹಿತಿಗೆ ಈ ಲೇಖನ ನೋಡಿ.

ಯಶಪಾಲ್ (1903-76). ಹಿಂದಿಯ ಪ್ರಸಿದ್ಧ ಕಾದಂಬರಿಕಾರ, ಕತೆಗಾರ, ಚಿಂತಕ. ಪ್ರಗತಿಶೀಲ ಆಂದೋಲನದ ನೇತಾರ ಹಾಗೂ ದೇಶದ ಸ್ವಾತಂತ್ರ್ಯ ಆಂದೋಲನಲ್ಲಿ ಭಾಗವಹಿಸಿದ ಕ್ರಾಂತಿಕಾರಿ.

ಬದುಕು

[ಬದಲಾಯಿಸಿ]

ಹುಟ್ಟಿದ್ದು ಫಿರೋಜ್‍ಪುರದಲ್ಲಿ. ತಂದೆ-ತಾಯಿ ಕಾಂಗಡಾ ಜಿಲ್ಲೆಯ ನಿವಾಸಿಗಳು. ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡ ಇವರು ತಾಯಿಯ ಆರೈಕೆಯಲ್ಲಿ ಬೆಳೆದರು. ಪ್ರಾಥಮಿಕ ಶಿಕ್ಷಣ ಕಾಂಗಡಾದ ಗುರುಕುಲದಲ್ಲಿ.

ಯಶಪಾಲ್ ಬಾಲ್ಯದಿಂದಲೂ ರಾಷ್ಟ್ರೀಯ ವಿಚಾರಧಾರೆಗಳಿಂದ ಪ್ರಭಾವಿತರಾಗಿದ್ದರು. ತಾಯಿ ಆರ್ಯಸಮಾಜದ ನಿಷ್ಠಾವಂತ ಕಾರ್ಯಕರ್ತೆಯಾಗಿದ್ದುದರಿಂದ ಇವರ ಮೇಲೆ ಆರ್ಯಸಮಾಜದ ಪ್ರಭಾವವೂ ಆಗಿದೆ. 1919ರಲ್ಲಿ ರೌಲತ್ ಆ್ಯಕ್ಟನ್ನು ವಿರೋಧಿಸಿ ಕಾಂಗ್ರೆಸ್ ನಡೆಸಿದ ಆಂದೋಲನದಲ್ಲಿ ಇವರು ಸಕ್ರಿಯವಾಗಿ ಭಾಗವಹಿಸಿದರು. 1921ರಲ್ಲಿ ಚೌರಿಚೌರಾದ ಘಟನೆಯ ಅನಂತರ ಗಾಂಧೀಜಿ ಅಸಹಕಾರ ಚಳವಳಿಯನ್ನು ಸ್ಥಗಿತಗೊಳಿಸಿದ್ದರಿಂದ ಇವರು ಲಾಹೋರಿನ ನ್ಯಾಶನಲ್ ಕಾಲೇಜು ಸೇರಿ ಓದಿ ಮುಂದುವರಿಸಿದರು. ಇಲ್ಲಿ ಯಶಪಾಲರಿಗೆ ಭಗತ್‍ಸಿಂಹ, ಸುಖದೇವ್, ಭಗವತಿಚರಣ್, ವೋಹ್ರಾ ಮೊದಲಾದ ಕ್ರಾಂತಿಕಾರಿಗಳ ಪರಿಚಯವಾಗಿ ಅವರಿಂದ ಪ್ರಭಾವಿತರಾದರು, ಪರಿಣಾಮವಾಗಿ ಗಾಂಧಿವಾದಿ ಮಾರ್ಗಕ್ಕಿಂತ ಕ್ರಾಂತಿಕಾರಿಮಾರ್ಗದಲ್ಲೇ ಇವರಿಗೆ ಹೆಚ್ಚು ಒಲವುಂಟಾಯಿತು. ಇವರು ನ್ಯಾಶನಲ್ ಕಾಲೇಜಿನಿಂದ ಬಿ.ಎ. ಪಾಸುಮಾಡಿ ಅಧ್ಯಾಪಕರಾಗಿದ್ದುಕೊಂಡೇ ಕ್ರಾಂತಿಕಾರಿ ದಳದ ಕೆಲಗಳನ್ನು ನಿರ್ವಹಿಸತೊಡಗಿದರು.

ಕ್ರಾಂತಿಕಾರಿ ದಳದ ಮತ್ತು ಬ್ರಿಟಿಪ್ ಸರ್ಕಾರದ ಮಧ್ಯೆ, ನಡೆದ ಅನೇಕ ಸಶಸ್ತ್ರ ಆಂದೋಲನಗಳಲ್ಲಿ ಇವರು ಸಕ್ರಿಯವಾಗಿ ಭಾಗವಹಿಸಿ ಜೈಲವಾಸಗಳನ್ನು ಅನುಭವಿಸಿದರು. ಲಾಹೋರಿನಲ್ಲಿ 1928ರಲ್ಲಿ ಲಾಲಾ ಲಜಪತ್‍ರಾಯ್ ಮೇಲೆ ನಡೆದ ಆಕ್ರಮಣ, 1929ರಲ್ಲಿ ದೆಹಲಿ ಅಸೆಂಬ್ಲಿಯ ಮೇಲೆ ಭಗತ್‍ಸಿಂಹ ಬಾಂಬನ್ನು ಎಸೆದ ಘಟನೆ ಹಾಗೂ ಬಾಂಬ್ ತಯಾರಿಸುವ ಕಾರ್ಖಾನೆಯನ್ನು ಸರ್ಕಾರ ಪತ್ತೆಹಚ್ಚಿದ ಪ್ರಸಂಗ ಈ ಎಲ್ಲದರಲ್ಲೂ ಯಶಪಾಲರ ಕೈವಾಡ ಇದ್ದುದರಿಂದ ಇವರು ಲಾಹೋರಿನಿಂದ ಪರಾರಿಯಾಗಬೇಕಾಯಿತು.

ಲಾಹೋರಿನಿಂದ ಪರಾರಿಯಾದ ಇವರು ತಮ್ಮ ಬರೆವಣಿಗೆಯನ್ನು ತೀವ್ರಗೊಳಿಸಿದರು. ಭಗವತಿಚರಣನ ಜೊತೆಗೂಡಿ ಹಿಂದೂಸ್ತಾನಿ ಸಮಾಜವಾದಿ ಪ್ರಜಾತಂತ್ರ ಸೇನಾದ ಘೋಷಣಾಪತ್ರ 'ಫಿಲಾಸಫೀ ಆಫ್ ದಿ ಬಾಂಬ್ ಅನ್ನು ಪ್ರಕಟಿಸಿದರು. ಇದೇ ಸಂದರ್ಭದಲ್ಲಿ ಗಾಂಧಿ ಮತ್ತು ಲೆನಿನ್ ಎಂಬ ಗ್ರಂಥ ಬರೆದು ಗುಪ್ತ ನಾಮದಲ್ಲಿ ಹೊರತರಲಾಯಿತು. ಮುಂದೆ ಸರ್ಕಾರಕ್ಕೆ ಈ ಸುದ್ದಿ ಗೊತ್ತಾಗಿ ಅದನ್ನು ಮುಟ್ಟಗೋಲು ಹಾಕಿತು.

ಪ್ರಜಾತಂತ್ರ ಸೇನಾದ ಕಮಾಂಡರ್ ಇನ್ ಚೀಫ್ ಆಗಿದ್ದ ಚಂದ್ರಶೇಖರ್ ಅಜಾದ್ 1931ರ ಫೆಬ್ರುವರಿಯಲ್ಲಿ ಅಲಹಾಬಾದ್‍ನ ಆಲ್ಫ್ರೆಡ್ ಪಾರ್ಕಿನಲ್ಲಿ ಹುತಾತ್ಮನಾದಾಗ ಯಶಪಾಲ್ ಅದರ ಕಮಾಂಡರ್ ಆಗಿ ನೇಮಕಗೊಂಡರು. ಆ ಮೂಲಕ ಕ್ರಾಂತಿಕಾರಿ ಚಟುವಟಿಕೆಯಲ್ಲಿ ಮತ್ತಷ್ಟು ಸಕ್ರಿಯರಾದ ಇವರನ್ನು ಬ್ರಿಟಿಷ್ ಸರ್ಕಾರ ಅಲಹಾಬಾದಿನಲ್ಲಿ ಬಂಧಿಸಿ 24 ವರ್ಷಗಳ ಕಠಿಣ ಶಿಕ್ಷೆಯನ್ನು ವಿಧಿಸಿತು. ಅನಂತರ ಕಾಂಗ್ರೆಸ್ ಸರ್ಕಾರದ ಬದಲಾದ ನೀತಿಯಿಂದಾಗಿ 1938ರ ಮಾರ್ಚಿಯಲ್ಲಿ ಇವರು ಜೈಲಿನಿಂದ ಬಿಡುಗಡೆಯಾದದರು.

ಇವರು ಬರೇಲಿಯ ಸೆಂಟ್ರಲ್ ಜೈಲಿನಲ್ಲಿದ್ದಾಗ, ಆಗಸ್ಟ್ 1936ರಲ್ಲಿ ಪ್ರಕಾಶವತಿ ಕಪೂರ್ ಎಂಬಾಕೆಯನ್ನು ವಿವಾಹವಾದರು. ಈಕೆಯೂ ಕ್ರಾಂತಿದಳದ ಸದಸ್ಯೆಯಾಗಿದ್ದ ಕಾರಣ 1934ರಲ್ಲಿ ದೆಹಲಿಯಲ್ಲಿ ಬಂಧಿಯಾಗಿದ್ದಳು. ಜೈಲುಗಳಲ್ಲಿದ್ದಾಗಲು ತಮ್ಮ ಅಧ್ಯಯನ ಚಿಂತನೆಯನ್ನು ಚಿಂತನೆಯನ್ನು ಮುಂದುವರಿಸಿಯೇ ಇದ್ದರು.

1938ರಲ್ಲಿ ಜೈಲಿನಿಂದ ಬಿಡುಗಡೆಯಾದರೂ ಇವರು ಪಂಜಾಬನ್ನು ಪ್ರವೇಶಿಸುವಂತಿರಲಿಲ್ಲ. ಹೀಗಾಗಿ ಲಕ್ನೌದ ಒಂದು ಸಾಪ್ತಾಹಿಕದಲ್ಲಿ ಉಪಸಂಪಾದಕರಾಗಿ ಸೇರಿದರು. ಮುಂದೆ ಅದನ್ನು ಬಿಟ್ಟು ಪತ್ನಿಯೊಡನೆ 'ವಿಪ್ಲವ್ ಎಂಬ ಮಾಸಪತ್ರಿಕೆಯನ್ನು ನಡೆಸಲಾರಂಭಿಸಿದರು. ಬಂಗಾಳಿ, ಫ್ರೆಂಚ್, ಇಟಾಲಿಯನ್ ಭಾಷೆಗಳನ್ನು ಈ ಪರಿಸರದಲ್ಲಿಯೇ ಕಲಿತದ್ದು.

ಇವರು ತಮ್ಮ 73ನೆಯ ವಯಸ್ಸಿನಲ್ಲಿ 26 ಡಿಸೆಂಬರ್ 1976ರಲ್ಲಿ ನಿಧನರಾದರು.

ಹಿಂದಿಯ ಪ್ರಮುಖ ಕಾದಂಬರಿಕಾರರಲ್ಲಿ ಯಶಪಾಲ್ ಒಬ್ಬರು. ದಾದಾ ಕಾಮ್ರೇಡ್, ದೇಶದ್ರೋಹಿ ಪಾರ್ಟಿ ಕಾಮ್ರೇಡ್, ಮನುಷ್ಯ ಕೇ ರೂಪ್, ಮೇರಿ-ತೇರಿ ಉಸ್‍ಕಿ ಬಾತ್, ಝಠಾ ಸಚ್, ಬಾರಹ್ ಘಂಟೆ ಅಪ್ಸರಾ ಕಾ ಶ್ರಾಪ್ ಕಾದಂಬರಿಗಳಲ್ಲಿ ಇವರು ದೇಶ ರಾಜಕೀಯ ಹಾಗೂ ಸಾಮಾಜಿಕ ಹಾಗೂ ಸಾಮಾಜಿಕ ಬದುಕಿನ ವೈವಿಧ್ಯಮಯ ಚಿತ್ರಣಗಳನ್ನು ನೀಡಿದ್ದಾರೆ.

ಯಶಪಾಲರ ಅತ್ಯಂತ ಮಹತ್ತ್ವದ ಕೃತಿಯಾದ 'ಝೂಠಾ ಸಚ್, ಭಾರತೀಯ ಸಾಹಿತ್ಯದ ಶ್ರೇಷ್ಠ ಕಾದಂಬರಿಗಳಲ್ಲೊಂದು ಎನಿಸಿದ. ಇದೊಂದು ಬೃಹತ್ ಕಾದಂಬರಿ.

ಯಶಪಾಲ್ ಹಿಂದಿಯ ಶ್ರೇಷ್ಠ ಕತೆಗಾರರೂ ಹೌದು. ಪಿಂಜರೇ-ಕೀ-ಉಡಾನ್, ವೋ ದುನಿಯಾ, ಜ್ಞಾನ್‍ದಾನ್, ಅಭಿಶಪ್ತ್, ನರಕ್ ಕಾ ತೂಫಾನ್ ಭಸ್ಮಾವ್ರತ್ ಚಿನ್ಗಾರಿ, ಪೊಲೋಂ ಕಾ ಕುರ್ತಾ, ಧರ್ಮಯುದ್ಧ್, ಉತ್ತರಾಧಿಕಾರಿ, ಚಿತ್ರ್ ಕಾ ಶೀರ್ಷಕ್, ತುಮ್‍ಸೇ ಕ್ಯೋಂ ಕಹಾ ಥಾ, ಮೈ ಸುಂದರ್ ಹೂಂ, ಉತ್ತಮೀ ಕೀ ಮಾಂ ಇವು ಇವರ ಕಥಾ ಸಂಗ್ರಹಗಳಲ್ಲಿ ಪ್ರಮುಖವಾದವು.

ಯಶಪಾಲ್ ಹಿಂದಿಯ ಅಗ್ರಗಣ್ಯ ಪ್ರಬಂಧಕಾರರು, ಚಿಂತಕ, ನ್ಯಾಯ್‍ಕಾ ಸಂಘರ್ಷ, ಬಾತ್ ಮೇ ಬಾತ್, ರಾಮ್ ರಾಜ್ಯ ಕೀ ಕಥಾ, ದೇಖಾ ಸೋಚಾ ಸಮ್‍ಝಾ. ಗಾಂಧೀವಾದ್ ಕೀ ಶವ್ ಪರೀಕ್ಷಾ ಲೋಹೆ ಕೀ ದೀವಾರ್ ಕೆ ದೋನೋ ಓರ್-ಇವು ಪ್ರಸಿದ್ಧ ಪ್ರಬಂಧ ಸಂಗ್ರಹಗಳು. ಈ ಸಂಗ್ರಹಗಳು ಮಾಕ್ರ್ಸವಾದ, ಗಾಂಧೀವಾದವನ್ನು ಕುರಿದಂತೆ ಯಶಪಾಲರ ಹಾಸ್ಯ ವಿನೋದ ಮತ್ತು ಕಾವ್ಯಾತ್ಮಕತೆಯಿಂದಾಗಿ ಓದುಗರಿಗೆ ಆಪ್ಯಾಯಮಾನವಾಗಿವೆ.

ನಶೇ ನಶೇ ಕೀ ಬಾತ್ ಎಂಬ ಹೆಸರಿನಲ್ಲಿ ಪ್ರಕಟವಾಗಿರುವ ಸಂಕಲನದಲ್ಲಿ ಯಶಪಾಲರ ಮೂರು ಏಕಾಂಕಗಳೂ ಸಂಗ್ರಹಗೊಂಡಿವೆ. ಇವು ವೈಚಾರಿಕ ನಾಟಕಗಳು ಸಂಪ್ರದಾಯದ ವಿರುದ್ಧ ಸಾಮಾಜಿಕ ಸಮಸ್ಯೆಗಳ ಬಗೆಗೆ ಯಶಪಾಲರ ಕ್ರಾಂತಿಕಾರಿ ವಿಚಾರಗಳು ಇಲ್ಲಿ ವ್ಯಕ್ತಗೊಂಡಿವೆ. ಸಿಂಹಾವಲೋಕನ ಯಶಪಾಲರ ಆತ್ಮಕತೆ. ಇಲ್ಲಿ ಇವರು ತಮ್ಮ ಬದುಕಿನ ಅನೇಕ ರೋಮಾಂಚನಕಾಗಿ ಘಟನೆಗಳನ್ನು ನಿರೂಪಿಸಿದ್ದಾರೆ. ಯಶಪಾಲರಿಗೆ ಸಂದ ಗೌರವ ಬಂದ ಪುರಸ್ಕಾರಗಳು ಹಲವು. ಹಿಂದಿ ಸಾಹಿತ್ಯ ಸಮ್ಮೇಳನದ ಮಂಗಳಾ ಪ್ರಸಾದ್ ಪುರಸ್ಕಾರ, ಸಾಹಿತ್ಯ ವಾಚಸ್ಪತಿ ಪುರಸ್ಕಾರ ಉತ್ತರ ಪ್ರದೇಶದ ಹಿಂದೀ ಸಾಹಿತ್ಯ ಸಮ್ಮೇಳನದ ಸಾಹಿತ್ಯ ವಾರಿಧಿ ಸನ್ಮಾನ, 1969ರಲ್ಲಿ ಸೋನಿಯತ್ ಲ್ಯಾಂಡ್ ನೆಹರೂ ಪುರಸ್ಕಾರಗಳಷ್ಟೇ ಅಲ್ಲದೆ ತೇರಿ ಮೇರಿ ಉಸ್‍ಕೀ ಬಾತ್ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರವೂ ದೊರಕಿದೆ. ಭಾರತ ಸರ್ಕಾರ 1970ರಲ್ಲಿ ಇವರಿಗೆ 'ಪದ್ಮಭೂಷಣ' ಪ್ರಶಸ್ತಿ ನೀಡಿ ಗೌರವಿಸಿತು. 1974ರಲ್ಲಿ ಆಗ್ರ ವಿಶ್ವವಿದ್ಯಾದಲಯ ಡಿ.ಲಿಟ್. ನೀಡಿ ಸನ್ಮಾನಿಸಿತು. ಇವರ ಅನೇಕ ಕೃತಿಗಳು ಅನೇಕ ಭಾರತೀಯ ಭಾಷೆಗಳಿಗೂ ಮತ್ತು ವಿದೇಶಿ ಭಾಷೆಗಳಿಗೂ ಅನುವಾದಗೊಂಡಿವೆ.

"https://kn.wikipedia.org/w/index.php?title=ಯಶಪಾಲ್&oldid=1177239" ಇಂದ ಪಡೆಯಲ್ಪಟ್ಟಿದೆ