ಜನಪದ ಆಭರಣಗಳು
ಜನಪದ ಆಭರಣಗಳು ವ್ಯಕ್ತಿಯ ಜೀವನದಲ್ಲಿ ಸೌಂದರ್ಯವರ್ಧಕವಾಗಿ, ಸೌಂದರ್ಯರಕ್ಷಕವಾಗಿ, ಔಪಯೋಗಿಕವಾಗಿ, ಆರೋಗ್ಯವರ್ಧಕವಾಗಿ, ಆಪದ್ಧನವಾಗಿ, ಅನ್ಯಾಕರ್ಷಕವಾಗಿ ಪ್ರದರ್ಶನಗೊಳುತ್ತಿವೆ. ಆದಿ ಮಾನವ ಪ್ರಕೃತಿಯ ಆರಾಧಕ. ಹಾಗಾಗಿ ನಿಸರ್ಗದ ನಮೂನೆಯಲ್ಲಿ ಆಭರಣ ಗಳನ್ನು ಮಾಡಿಸಿ ಕೊಳ್ಳುವುದನ್ನು ರೂಢಿಸಿ ಕೊಂಡಿದ್ದಾನೆ. ಮೈಮೇಲೆ ತುಂಡು ಬಟ್ಟೆ ಧರಿಸದಿದ್ದರೂ, ಇಡೀ ದೇಹ ಮುಚ್ಚುವಷ್ಟು ಒಡವೆಗಳನ್ನು ಯಾವುದೇ ಎಗ್ಗಿಲ್ಲದೆ ಧರಿಸಿ, ತನ್ನ ಅಲಂಕಾರ ಪ್ರಿಯತೆಯನ್ನು ಮೆರೆದಿದ್ದಾನೆ. ಒಡವೆ ಧರಿಸಲು ವಯೋಮಿತಿಯೇನು ಇಲ್ಲ. ಇಂತಹ ಆಭರಣಗಳ ಅಧ್ಯಯನ ಹೊಸಲೋಕವೂಂದರ ದರ್ಶನ ಮಾಡಿಸುತ್ತಾ, ವಿಸ್ಮಯದೊಂದಿಗೆ ಆನಂದವನ್ನು ಉಂಟು ಮಾಡುತ್ತದೆ. ಆಭರಣಗಳಿಗೆ ಮೂಲ ಪ್ರೇರಣೆ 'ಹಚ್ಚೆ'. ಆರಂಭದಲ್ಲಿ ಒಡವೆಗಳು ಮಣ್ಣು, ಮಣಿ, ಕವಡೆ,ಪ್ರಾಣಿಗಳ ಕೊಂಬಿನಿಂದ, ಶಂಖಗಳಿಂದ ಮಾಡಲ್ಪಟ್ಟರೂ, ಅವು ಬೇಗನೆ ನಶಿಸಿ ಹೋಗುತ್ತಿದ್ದುದರಿಂದ ಲೋಹಗಳ ಆಭರಣಗಳು ಬೆಳಕಿಗೆ ಬಂದುವು.
ಪ್ರವೇಶಿಕೆ
[ಬದಲಾಯಿಸಿ]ಜಾನಪದ ಸಾಗರದಷ್ಟು ಆಳ, ಆಕಾಶದಷ್ಟು ವಿಸ್ತಾರ. ಅದಕ್ಕೆ ಹಿರಿಯ ವಿದ್ವಾಂಸರು-"ಹರಿಯ ಒಡಲಲ್ಲಿ ಬ್ರಹ್ಮಾಂಡ ಅಡಗಿರುವಂತೆ, ಜಾನಪದ ಕುಕ್ಷಿಯಲ್ಲಿ ಇಡೀ ಜಗತ್ತೆಲ್ಲವೂ ಹುದುಗಿದೆ" ಎಂದಿದ್ದಾರೆ. ಜಾನಪದವು ಒಂದು ವಿಶೇಷ ಅಧ್ಯಯನ ವಿಷಯವಾಗಿ ಬೆಳೆದಿದೆ. ಅದು ಕೇವಲ ಸಂಗ್ರಹ, ರಸವಿಮರ್ಶೆಗಳಿಗಷ್ಟೇ ಮೀಸಲಾಗಿಲ್ಲ. ಅವುಗಳೊಂದಿಗೆ-
- ನಗರ ಜಾನಪದ,
- ಲಿಖಿತ ಜಾನಪದ,
- ಸಸ್ಯ ಜಾನಪದ,
- ಪ್ರಾಣಿ ಜಾನಪದ,
- ಖನಿಜ ಜಾನಪದ ಮುಂತಾದ ಕವಲುಗಳಾಗಿ ಒಡೆದು ತನ್ನ ವ್ಯಾಪ್ತಿಯ ಹರಹನ್ನು ವಿಸ್ತರಿಸಿ ಕೊಂಡಿದೆ. ಇವುಗಳನ್ನು ಕುರಿತಂತೆ ಅಲೆಗ್ಸಾಂಡರ್ ಎಚ್. ಕ್ರಾಫೆ ಎಂಬ ಪಾಶ್ಚಾತ್ಯ ವಿದ್ವಾಂಸ ತಮ್ಮ ಗ್ರಂಥವಾದ 'ಸೈನ್ಸ್ ಆಫ್ ಫೋಕ್ಲೋರ್' ನಲ್ಲಿ ವಿಶಿಷ್ಟ ಚಿಂತನೆ ನಡೆಸಿದ್ದಾರೆ. ಅದೆಂದರೆ-
- "ಮಾನವ ಸಂಸ್ಕೃತಿ ನಿರ್ಮಾಣದಲ್ಲಿ 'ಖನಿಜ ಜಾನಪದ'ಗಳ ಪಾತ್ರ ಬಹಳ ಪ್ರಮುಖ. ಇಳೆಯಲ್ಲಿ ನೈಸರ್ಗಿಕವಾಗಿ ದೊರೆಯುವ, ಒಂದು ಸ್ಥಿರವಾದ ಭೌತಿಕ ಗುಣಗಳನ್ನು ಹೊಂದಿರುವ ಯಾವುದೇ ಅಜೈವಿಕ ವಸ್ತುವನ್ನು 'ಖನಿಜ' ಎನ್ನಬಹುದು. ಉದಾ:ಚಿನ್ನ,ಬೆಳ್ಳಿ,ಪ್ಲಾಟಿನಂ, ತಾಮ್ರ, ಕಬ್ಬಿಣ, ಸೀಸ, ತವರ, ಸತು, ಮ್ಯಾಂಗನೀಸ್ ಮೊದಲಾದುವುಗಳೊಂದಿಗೆ ಅಮೃತಶಿಲೆ, ನವರತ್ನಗಳು, ಕಟ್ಟಡದ ಕಲ್ಲುಗಳು ಖನಿಜವ್ಯಾಪ್ತಿಯಲ್ಲಿ ಬರುತ್ತವೆ.
- ಅನೇಕ ಬಗೆಯ ಖನಿಜಗಳು ಶಿಲಾಯುಗ ಕಾಲದಿಂದ ಇಲ್ಲಿಯವರೆಗೂ ಮನುಷ್ಯ ಜೀವನದೊಂದಿಗೆ ನಿಕಟ ಸಂಪರ್ಕ ಹೊಂದಿವೆ." ಹೀಗೆ ಖನಿಜ ಜಾನಪದ ವ್ಯಾಪ್ತಿಗೆ ಒಳಪಡುವ ಆಭರಣಗಳ ಅಧ್ಯಯನ ತುಂಬಾ ಮಹತ್ವದ್ದು. ಭಾರತದ ಆರ್ವಾಚಿನಯುಗದಲ್ಲಿ ಶರೀರ ಅಲಂಕಾರವು ಅಲ್ಲಿನ ಧಾರ್ಮಿಕ, ಸಾಂಸ್ಕೃತಿಕ ಸಂಪ್ರದಾಯಗಳಲ್ಲಿ ಬಹು ಮುಖ್ಯವಾಗಿತ್ತು. ಒಡವೆ, ವಸ್ತೃಗಳು ಪ್ರಸಾಧನದ ಮುಖ್ಯ ಪರಿಕರಗಳಾಗಿದ್ದುವು.
- ಆ ದಿನಗಳಲ್ಲಿ ಹೆಣ್ಣು-ಗಂಡು ಸರಿಸಮಾನವಾಗಿ ಬಹಳ ಶ್ರದ್ಧೆಯಿಂದ ಅಲಂಕರಿಸಿ ಕೊಳ್ಳುತ್ತಿದ್ದುದು ಕಂಡು ಬರುತ್ತದೆ. 'ಆಭರಣ'ಕ್ಕೆ 'ಶೃಂಗಾರ'ವೆಂಬ ವ್ಯಾಪಕ ಅರ್ಥವಿದೆ. ದೇಸಿಯ ನುಡಿಯಲ್ಲಿ ಇದನ್ನು -ತೊಡವು,ತೊಡುಗೆ ಎಂದರೆ, ಪ್ರಾಚೀನ ನಿಘಂಟುವಿನಲ್ಲಿ-ಪಸದನ, ಪಚ್ಚ, ತೊಡಂ ಎಂದೂ, ಆಧುನಿಕ ನಿಘಂಟುವಿನಲ್ಲಿ-ಒಡವೆ, ವಡವೆ, ನಗ, ವಸ್ತು, ಆಭೂಷಣ, ಆಭರಣ, ಅಲಂಕಾರ ವಸ್ತುವೆಂದು ಹೇಳಲಾಗಿದೆ. ಆಂಗ್ಲಭಾಷೆಯಲ್ಲಿ-Jewellary, Ornaments ಎನ್ನುತ್ತಾರೆ.
- ಆಭರಣಗಳು ಮಾನವನ ವ್ಯಕ್ತಿತ್ವದ ಪ್ರಧಾನ ಅಂಶಗಳಲ್ಲಿ ಮುಖ್ಯವಾದುವು. ಆದಿ ಮಾನವ ಪ್ರಕೃತಿಯ ಆರಾಧಕ. ಹಾಗಾಗಿ ನಿಸರ್ಗದ ನಮೂನೆಯಲ್ಲಿ ಆಭರಣಗಳನ್ನು ಮಾಡಿಸಿ ಕೊಳ್ಳುವುದನ್ನು ರೂಢಿಸಿ ಕೊಂಡಿದ್ದಾನೆ. ಮೈಮೇಲೆ ತುಂಡು ಬಟ್ಟೆ ಧರಿಸದಿದ್ದರೂ, ಇಡೀ ದೇಹ ಮುಚ್ಚು ವಷ್ಟು ಒಡವೆಗಳನ್ನು ಯಾವುದೇ ಎಗ್ಗಿಲ್ಲದೆ ಧರಿಸಿ,ತನ್ನ ಅಲಂಕಾರ ಪ್ರಿಯತೆಯನ್ನು ಮೆರೆದಿದ್ದಾನೆ. ಒಡವೆ ಧರಿಸಲು ವಯೋಮಿತಿಯೇನು ಇಲ್ಲ. ಇಂತಹ ಆಭರಣಗಳ ಅಧ್ಯಯನ ಹೊಸ ಲೋಕವೂಂದರ ದರ್ಶನ ಮಾಡಿಸುತ್ತಾ, ವಿಸ್ಮಯದೊಂದಿಗೆ ಆನಂದವನ್ನು ಉಂಟು ಮಾಡುತ್ತದೆ.
ಜನಪದರು
[ಬದಲಾಯಿಸಿ]- ೧೯ನೇ ಶತಮಾನದಲ್ಲಿ ವಿಶ್ವದಾದ್ಯಂತ ತಲೆದೋರಿದ ಕೈಗಾರಿಕ ಕ್ರಾಂತಿಯಿಂದ ಹಬ್ಬಿದ ನಾಗರಿಕತೆಯಿಂದ ಜಗತ್ತಿನ ಜನಪದರು ಪ್ರಭಾವಿತರಾದರು. ಭಾರತದಲ್ಲಿ ಗ್ರಾಮೀಣ ಪ್ರದೇಶಗಳ ಸಂಖ್ಯೆ ಹೆಚ್ಚಾಗಿರುವುದರಿಂದ, ಜನಪದರ ಸಂಖ್ಯೆಯು ಅಧಿಕವಾಗಿದೆ. ಸಾಮಾನ್ಯವಾಗಿ ಜನಪದ ರೆಂದರೆ, ಹಳ್ಳಿಗಳಲ್ಲಿದ್ದುಕೊಂಡು ತಮ್ಮ ಸುತ್ತಲಿರುವ ಪರಿಸರ,ಮಣ್ಣಿನ ನಾಡಿಮಿಡಿತವನ್ನು ಅರಿತು ಅಲ್ಲೇ ಬದುಕುತ್ತಿರುವ ಕೃಷಿಕರು.
- ಜನಪದರು ಜನ್ಮತ: ಶ್ರಮಜೀವಿಗಳು, ನಿಸರ್ಗಪ್ರೇಮಿಗಳು. ಇವರು ವ್ಯವಸಾಯವನ್ನೇ ಅವಲಂಭಿಸಿ,ಅದನ್ನೇ ತಮ್ಮ ಜೀವನೋಪಾಯವನ್ನಾಗಿ ಮಾಡಿಕೊಂಡು, ಅದರಿಂದ ಬರುವ ಲಾಭ-ನಷ್ಟಗಳಿಗೆ ಹಿಗ್ಗದೆ, ಕುಗ್ಗದೆ ಸಮತೋಲನ ಜೀವನವನ್ನು ನಡೆಸುತ್ತಿದ್ದಾರೆ. ಜನಪದರ ಚರಿತ್ರೆಯನ್ನು ಯಾರು ಬರೆದಿಲ್ಲವಾದರೂ, ಜನರ ನಿರಂತರ ಆಚರಣೆ ಅದು ಬದಲಾಗದಂತೆ ಕಾಪಾಡಿಕೊಂಡು ಬಂದಿದೆ.
ಒಡವೆಗಳ ಚಾರಿತ್ರಿಕ ಒಡಲು
[ಬದಲಾಯಿಸಿ]ಮಾನವ ಇತಿಹಾಸದಲ್ಲಿ ಖನಿಜಗಳಿಗೆ ಸಂಬಂಧ ಪಟ್ಟಂತೆ ನಾಲ್ಕು ಸಾಮಾಜಿಕ ಯುಗಗಳು ಬಳಕೆಯಲ್ಲಿವೆ. ಅವುಗಳೆಂದರೆ-
- ಚಿನ್ನದ ಯುಗ,
- ಬೆಳ್ಳಿ ಯುಗ,
- ಹಿತ್ತಾಳೆ ಯುಗ,
- ಕಬ್ಬಿಣದ ಯುಗ. ಇವುಗಳೊಳಗೆ ಪವನ, ತಾಮ್ರ, ಕಂಚು, ಸತುಗಳು ಸೇರ್ಪಡೆಗೊಂಡಿವೆ.
- ಇವೆಲ್ಲ ಲೋಹಗಳು ಮನುಷ್ಯನೊಂದಿಗೆ, ಅವನ ಮನಸ್ಸಿನೊಂದಿಗೆ ನಿಕಟ ಸಂಬಂಧವನ್ನು ಹೊಂದಿವೆ. ಈ ಲೋಹಗಳಲ್ಲಿ ಚಿನ್ನ, ಬೆಳ್ಳಿಗಳೆರಡು ಆರ್ಥಿಕವಾಗಿ ತುಂಬಾ ಬೆಲೆಯುಳ್ಳ ಲೋಹಗಳಾಗಿವೆ. ಆಭರಣಗಳು ವ್ಯಕ್ತಿಯ ಜೀವನದಲ್ಲಿ ಸೌಂದರ್ಯವರ್ಧಕವಾಗಿ, ಸೌಂದರ್ಯರಕ್ಷಕವಾಗಿ, ಔಪಯೋಗಿಕವಾಗಿ, ಆರೋಗ್ಯವರ್ಧಕವಾಗಿ, ಆಪದ್ಧನವಾಗಿ, ಅನ್ಯಾಕರ್ಷಕವಾಗಿ ಪ್ರದರ್ಶನಗೊಳುತ್ತಿವೆ.
- ಪವನ ಚಿನ್ನವು ಅಪರಂಜಿ ಚಿನ್ನಕ್ಕಿಂತ ತುಸು ಕೆಂಪೊತ್ತಿನ ಹಳದಿ ವರ್ಣವನ್ನು ಹೊಂದಿರುತ್ತದೆ. ಈ ಮಿಶ್ರಲೋಹವನ್ನು ೨೨ಕ್ಯಾರೆಟ್ ಎನ್ನುತ್ತಾರೆ. ಇದರಲ್ಲಿ ೨ಪಾಲು ತಾಮ್ರ,೨೨ಪಾಲು ಚಿನ್ನ ಸೇರಿಕೊಂಡಿರುತ್ತದೆ. 'ಕ್ಯಾರೆಟ್' ಎಂಬುದು ಚಿನ್ನದ ಪರಿಶುದ್ದತೆಯನ್ನು ಓರೆಗಚ್ಚುವ ಪ್ರಮಾಣ ಸೂಚಕ. ೨೪ಕ್ಯಾರೆಟ್ ಚಿನ್ನ ಶುದ್ದ ಬಂಗಾರದ್ದಾದರೂ, ಅದಕ್ಕೂ ತುಸು ಸತು, ಸ್ವಲ್ಪ ಬೆಳ್ಳಿ ಬೆರೆಸಿದಾಗಲೇ ಅದಕ್ಕೊಂದು ಸ್ಪಷ್ಟ ರೂಪ ಕೊಡಲು ಸಾಧ್ಯ.
- ಬರೀ ಚಿನ್ನದಲ್ಲಿ ಯಾವುದೇ ರೂಪ ಮೂಡಿಸಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಅಕ್ಕಸಾಲಿಗರು. ಚಿನ್ನದ ಒಡವೆ ತಯಾರಿಕೆಗಾಗಿ ಮೇಣದಿಂದ ಮಾದರಿಗಳನ್ನು ರಚಿಸಿ, ಅವಕ್ಕೆ ಜೇಡಿಮಣ್ಣು ಮತ್ತು ಸೆಗಣಿಯ ತೇಪೆಹಾಕಿ ಬಿಸಿಲಲ್ಲಿ ಚೆನ್ನಾಗಿ ಒಣಗಿಸಿಡುತ್ತಾರೆ, ನಂತರ ಚಿನ್ನವನ್ನು ೧೦೬೩೦ಸೆಂಟಿಗ್ರೇಡ್ ಉಷ್ಣತೆಯಲ್ಲಿ ಕರಗಿಸಿ, ಆ ದ್ರವರೂಪದ ಮಿಶ್ರಣವನ್ನು ಮಾದರಿಯಲ್ಲಿ ಹಾಕಿ ಆರಲು ಬಿಡುತ್ತಾರೆ.
- ನಂತರ ಅದು ಆ ನಮೂನೆಯ ಆಕಾರಕ್ಕೆ ರೂಪುಗೊಳ್ಳುತ್ತದೆ. ಚಿನ್ನದಲ್ಲಿ 'ಕೆಡಿಎಂ' ಚಿನ್ನ ಪ್ರಸಿದ್ದವಾದುದು. ಕೆಡಿಎಂ 'ಕ್ಯಾಡ್ಮಿಯಂ' ಲೋಹಕ್ಕೆ ಸಂಬಂಧಿಸಿದ್ದು. ಶೇಕಡ ೯೦ರಷ್ಟು ಚಿನ್ನ ಮತ್ತು ಶೇಕಡ ೧೦ರಷ್ಟು ಕೆಡಿಯಂ ಬಳಸಿ ಬಹಳಷ್ಟು ಆಭರಣಗಳನ್ನು ತಯಾರಿಸಲಾಗುತ್ತದೆ. ಆಭರಣಗಳ ವಿನ್ಯಾಸದಲ್ಲಿ ಕುಶಲತೆ ಅಧಿಕವಾದಷ್ಟು ಅದರಲ್ಲಿ 'ವೇಸ್ಟೇಜ್' ಹೆಚ್ಚಾಗುತ್ತದೆ.
- ಕೆಡಿಯಂ ಚಿನ್ನ ಯಾವುದೇ ಹವೆಗೂ ಮಾಸುವುದಿಲ್ಲ. ೯.೧೬ಹಾಲ್ಮಾರ್ಕ್ ಒಡವೆ ಇತ್ತೀಚಿನ ಬೆಳವಣಿಗೆ, ಬದಲಾವಣೆಯೆಂದು ಹೇಳಲಾಗುತ್ತಿದೆ. ಬೆಳ್ಳಿ ಧವಳ/ಶ್ವೇತ ವರ್ಣದ ಲೋಹ. ಪ್ರಾಚೀನ ಈಜಿಪ್ಟ್ನ ನಲ್ಲಿ ಚಿನ್ನಕ್ಕಿಂತ ಬೆಳ್ಳಿಗೆ ಹೆಚ್ಚು ಬೆಲೆ. ಇವೆರಡು ಲೋಹಗಳು ಯಾವ ಕಾಲಕ್ಕೂ ತುಕ್ಕು ಹಿಡಿಯುವುದಿಲ್ಲ.
- ಇವುಗಳಿಗಿರುವ ಚಿಕ್ಕ ಕೊರತೆ ಎಂದರೆ ಅವುಗಳ ಸವೆತ. ಶಿಲಾಯುಗದಿಂದ ಇಂದಿನವರೆಗೂ ಒಡವೆಗಳು ಮನುಷ್ಯ ಆಸಕ್ತಿಯ ವಿಷಯವಾಗಿವೆ. ಆಭರಣಗಳಿಗೆ ಮೂಲ ಪ್ರೇರಣೆ 'ಹಚ್ಚೆ'. ಆರಂಭದಲ್ಲಿ ಒಡವೆಗಳು ಮಣ್ಣು, ಮಣಿ, ಕವಡೆ,ಪ್ರಾಣಿಗಳ ಕೊಂಬಿನಿಂದ, ಶಂಖಗಳಿಂದ ಮಾಡಲ್ಪಟ್ಟರೂ, ಅವು ಬೇಗನೆ ನಶಿಸಿ ಹೋಗುತ್ತಿದ್ದುದರಿಂದ ಲೋಹಗಳ ಆಭರಣಗಳು ಬೆಳಕಿಗೆ ಬಂದುವು.
ಹರಳುಗಳ ಸಂಕ್ಷಿಪ್ತ ಸಮೀಕ್ಷೆ
[ಬದಲಾಯಿಸಿ]ಆಭರಣಗಳನ್ನು ಮಾಡಿಸುವಲ್ಲಿ 'ನವರತ್ನ'ಗಳ ಪಾತ್ರ ಬಹಳ ಮುಖ್ಯವಾದುದು. ನವರತ್ನಗಳನ್ನು 'ಹರಳು'ಗಳೆಂಬ ಸಾಮಾನ್ಯ ಹೆಸರಿನಿಂದಲೂ ಕರೆಯುತ್ತಾರೆ. ಒಂಬತ್ತು ಬಗೆಯ ಹರಳುಗಳು ನವರತ್ನಗಳೆಂದು ಗುರುತಿಸಲ್ಪಟ್ಟಿವೆ. ಪ್ರತಿ ಹರಳುಗಳಿಗೂ ಅವುಗಳದೇ ಆದ ವಿಶಿಷ್ಟ ಗುಣ, ವಿಶೇಷತೆಗಳಿರುವುದನ್ನು ಕಾಣಬಹುದು. ನವರತ್ನಗಳ ಹುಟ್ಟಿನ ಬಗ್ಗೆ ಪುರಾಣದಲ್ಲಿ ಒಂದು ಚಿಕ್ಕ ಕಥೆಯಿದೆ. ಅದೆಂದರೆ- ಒಮ್ಮೆ ಸುರರು 'ವೇಲಾಸುರ'ನೆಂಬ ಅಸುರನನ್ನು ಕೊಂದಾಗ, ಆ ರಕ್ಕಸನ ಅಂಗಾಂಗಗಳು ನವರತ್ನಗಳಾಗಿ ಪರಿವರ್ತನೆಗೊಂಡುವಂತೆ. ವೇಲಾಸುರನ ಮೂಳೆಯಿಂದ- ವಜ್ರವೂ, ಹಲ್ಲಿನಿಂದ -ಮುತ್ತು, ರಕ್ತದಿಂದ -ಮಾಣಿಕ್ಯವೂ, ಮೇದಸ್ಸಿನಿಂದ -ಪಚ್ಚೆಯೂ, ಮಾಂಸದಿಂದ- ಹವಳವೂ, ಶ್ಲೇಷ್ಮದಿಂದ-ಪುಷ್ಯರಾಗ, ನರದಿಂದ-ಗೋಮೇಧಿಕ, ರೋಮದಿಂದ- ವೈಢೂರ್ಯವೂ, ಕಂಗಳಿಂದ ನೀಲ ಹುಟ್ಟಿವೆಯೆಂದು ಹೇಳಲಾಗಿದೆ.
- ವಜ್ರ - ಹರಳುಗಳ ರಾಜ. ಬಿಳಿ ಬಣ್ಣದಿಂದ ಕೂಡಿದೆ.
- ರತ್ನ - ಇದನ್ನು 'ಮಣಿ'ಯೆಂದೂ ಕರೆಯುವರು.'ಸ್ಕಂದಪುರಾಣ'ವು 'ಬಲ'ನೆಂಬ ರಾಕ್ಷಸನ ಅಂಗಾಂಗಗಳಿಂದ ಬಗೆ ಬಗೆಯ ರತ್ನಗಳು ಹುಟ್ಟಿವೆ ಎಂದಿದೆ.
- ಮುತ್ತು -ಸಾಗರದ ಕಪ್ಪೆಚಿಪ್ಪಿನಲ್ಲಿ, ಶಂಖಗಳಲ್ಲಿ ದೊರೆಯುವಂತಹುದು.
- ಗೋಮೇಧಿಕ -ಕಡು ಗೋಧಿಬಣ್ಣ, ಮಧುವರ್ಣವನ್ನೂ ಹೊಂದಿದೆ.
- ಮಾಣಿಕ್ಯ -ಇದು ತಾವರೆಯ ಹೊಂಬಣ್ಣವನ್ನು ಹೊಂದಿದೆ. ಇದಕ್ಕೆ 'ಪದ್ಮರಾಗ'ವೆಂಬ ಮತ್ತೊಂದು ಹೆಸರು ಇದೆ.
- ಮರಕತ -ಗರಿಕೆ ಬಣ್ಣದಿಂದ ಹೊಳೆಯುವಂತಹುದು. ಇದಕ್ಕೆ 'ಪಚ್ಚೆ' ಎಂಬ ಹೆಸರು ಇದೆ.
- ಪುಷ್ಯರಾಗ - ಕೆಂಡದ ಬಣ್ಣ, ಬಿಳಿಬಣ್ಣವನ್ನು ಹೊಂದಿದೆ. ಇದಕ್ಕೆ 'ಚಂದ್ರಕಾಂತ ಮಣಿ' ಎನ್ನುವರು.
- ಹವಳ -ಇದರಲ್ಲಿ ಹಲವಾರು ವರ್ಣಗಳಿವೆ.
- ವೈಢೂರ್ಯ -ನವಿಲಿನ ಕೊರಳ ಬಣ್ಣದ ಹರಳು. ಇದರಲ್ಲೂ ಹಲವು ವಿಧಗಳಿವೆ.
ತೊಡುಗೆಯ ವಿಭಜನಾ ಕ್ರಮ
[ಬದಲಾಯಿಸಿ]ಮಕ್ಕಳ ಆಭರಣಗಳು
[ಬದಲಾಯಿಸಿ]ಮಕ್ಕಳ ಒಡವೆಗಳೆಲ್ಲ ಸಾಮಾನ್ಯವಾಗಿ ಚಿನ್ನ, ಬೆಳ್ಳಿಯಿಂದ ಮಾಡಿದವುಗಳಾಗಿವೆ. ಅರಳೆಲೆ, ಅಂದುಗೆ, ಮಾಗಾಯಿ, ಮುರ, ಎಲೆ, ನಕ್ಷತ್ರ, ಬಿಂದುಲಿ, ದಿಟ್ಟಿಮಣಿಸರ, ಹವಳದ ಸರ, ಹುಲಿಯುಗುರು, ಬಾಲಿಮಣಿ, ತಟ್ಟುಮಣಿ, ಹನುಮಂತನತಾಳಿ, ಗೆಜ್ಜೆ ಉಡುದಾರ, ಪಟ್ಟೆ ಉಡುದಾರ, ಕೈಕಟ್ಟು, ಕಡಗ, ನುಲಿಕೆ, ಕಪ್ಪ, ಉಂಗುರಗಳು, ಕಾಲ್ಕಡಗ, ಗೆಜ್ಜೆ ಚೈನು, ಪೆಂಡೆ ಗೆಜ್ಜೆ, ಹಾಲ್ಗಡಗ ಮುಂತಾದುವು. ಮಕ್ಕಳ ಆಭರಣಗಳಲ್ಲಿ ಪ್ರಮುಖವಾಗಿ ನಾಲ್ಕು ವಿಭಾಗಗಳಿವೆ-
- ಚಿನ್ನದ ಒಡವೆ
- ವಜ್ರದ ಆಭರಣಗಳು
- ಮುತ್ತಿನ ಆಭರಣಗಳು
- ಬೆಳ್ಳಿಯ ಆಭರಣಗಳು.
ಪುರುಷರ ಆಭರಣಗಳು
[ಬದಲಾಯಿಸಿ]ಆರಂಭ ಕಾಲದಲ್ಲಿ ಸ್ತೀ -ಪುರುಷರು ಹೆಚ್ಚು ಕಡಿಮೆ ಸಮಾನವಾಗಿ ಆಭರಣಗಳನ್ನು ಧರಿಸುತ್ತಿದ್ದರು. ಕಾಲಕ್ರಮೇಣ ಪುರುಷರು ಆಭರಣಗಳಿಂದ ವಿಮುಖವಾಗ ತೊಡಗಿದರು. ಮುರ, ಮುರವು, ಒಂಟಿಹರಳು, ಒಂಟಿಮುತ್ತು, ರತ್ನಕುಂಡಲ, ಕರ್ಣಕುಂಡಲ, ಹತ್ತಕಡಕು, ಜಂಟ್ಲಗುಂಡಲ, ಬಾವುಲಿ, ಗುಬ್ಬಿಬಾವುಲಿ, ಚಂದ್ರಬಾವುಲಿ, ಕಂಠೀಹಾರ, ಗುಂಡಿನಸರ, ಪವನಸರ, ಗೋಪು, ಅಸಲಿ, ಚಪಲಹಾರ, ಜೀರಿಗೆಸರ, ಬಠಾಣಿಸರ, ಹಗ್ಗದುರಿ ಚೈನು, ನೇವಳ, ಉಡುದಾರ, ತನಿಮಣಿ, ಗಜಗ, ಪಟ್ಟಿಉಡುದಾರ, ತೋಳ್ಬಳೆ, ತೋಡೆ, ಕೇಯೂರ, ಬಾಪುರಿ, ಬಾಹುಬಂಧ, ಒಂಟೀಬಳೆ, ಕಂಕಣ, ಕಡಗ, ಬಿಂದ್ಲಿ, ಪೋಚೆ/ಪಾಟ್ಲಿ, ಕಪ್ಪ, ಬದ್ದು, ನುಲಿಕೆ ಕಪ್ಪ, ಬಿರುದು, ಸಾದದುಂಗುರ, ಹರಳಿನುಂಗುರ, ಹವಳದುಂಗುರ, ಮುತ್ತಿನುಂಗುರ, ನವರತ್ನದುಂಗುರ, ವಜ್ರದುಂಗುರ, ಗಂಡುಮಿಂಚು, ಕಾಲ್ಕಡಗ, ಪೆಂಡೆ ಮುಂತಾದುವು.
ಮಹಿಳೆಯರ ಆಭರಣಗಳು
[ಬದಲಾಯಿಸಿ]ಸಾಧಾರಣವಾಗಿ ಆಭರಣಗಳೆಲ್ಲ ಹೆಣ್ಣಿಗಾಗೇ ಹೆಚ್ಚಾಗಿ ರೂಪುಗೊಂಡಿವೆ. ಬೈತಲೆ ಬೊಟ್ಟು,/ಮಣಿ.ಸರ, ಪದಕ, ಸೀಮಂತಮಣಿ, ಸೂರ್ಯ, ಚಂದ್ರಕೋಲು, ಕೇದಿಗೆ, ನಾಗರ, ವೊಗ್ಗಿನಮಾಲೆ, ಜಡೆಬಿಲ್ಲೆ, ಜಡೆನಾಗರ, ಜಡೆಸರ, ಜಡೆಗೊಂಡೆ, ಜಡೆಬಂಗಾರ, ಗಿಳಿಹೆರಳು, ಓಲೆ-ಮುತ್ತಿನ/ವಜ್ರದ/ಹರಳಿನ/ಕರಿಮಣಿ/ ಸೀಮೆ ಕಮಲದ/ನೀಲದ/ಕುಡುಕಿ/ನವರತ್ನದ/ಬಿಚ್ಚೋಲೆ/ಗುಮ್ಮಂಚಿನೋಲೆ, ಜುಮುಕಿ, ಬುಗುಡಿ-ಮುತ್ತಿನ/ಎಲೆ/ಕಡ್ಡಿ/ಗೆಜ್ಜೆತಳುಕಿನ/ನೆಲ್ಲಿಕಾಯಿ, ತಟ್ಟು, ಬಾಬುಲು, ಮೇಟಿಕೊಳವೆ, ಮುಳುಗು, ಬಾವಲಿ-ಮುತ್ತಿನ/ಹರಳಿನ/ಚಂದ್ರ/ಗುಬ್ಬಿ/ಕಿಡಕಿ/ವೊಗ/ಬುರುಗಿ/ಬಾಳ, ಚೌಕಳಿ, ಅಗಸಿಕಡ್ಡಿ, ಮುರ, ಕೆನ್ನೆಸರಪಳಿ, ಮಿಂಚಪಟ್ಟಿ, ತಾಲೂಕ, ದ್ರಾಕ್ಷಿಪಟ್ಟಿ, ಹುಜರ, ಬೆಳ್ಳಿತಂಬು, ಕರ್ಣಮೂಲ, ಮೂಗುತಿ, ನತ್ತು, ಬುಲಾಕು, ಮುಕುರ, ಗೋಟ, ಮುರುಬಟ್ಟು, ಮೂಗುಬಟ್ಟು, ಗಾಡೆ, ನಾಸಮಣಿ, ಏಕಾವಳಿ, ಸರಿಗೆ, ಹಾರ/ಸರ/ಮಾಲೆ- ಮುತ್ತಿನ/ರತ್ನದ/ಪದಕ/ನಕ್ಷತ್ರ/ದೊಡ್ಡಗುಂಡು/ಸಣ್ಣಗುಂಡು/ಚಿಂತಾಕು/ಕಟ್ಟಾಣಿ/ಸರಿಗೆಬಂದಿ/ಅಡ್ಡಿಕೆ/ಮೋಹನ/ಕಂಠ/ಟೀಕಿ/ಗೋಧಿ/ಅವಲಕ್ಕಿ/ಬಟಾಣಿ/ಮಾವಿನಕಾಯಿ/ನೆಲ್ಲಿಕಾಯಿ/ಕಾಸಿನಸರ/ತಾಳಿ/ತೋರಹಾರ/ಹೀರಹಾರ/ಹಗ್ಗದ ಚೈನು, ನಾಗಮರಿ,ತೋಳ್ಬಂದಿ ,ವಂಕಿ, ಬಳೆ-ಚಿನ್ನ/ಬೆಳ್ಳಿ/ಬಂಗಾರ/ಮುತ್ತು/ಹರಳು/ಕಡಗ/ಗೋಟು/ಬಿಲ್ವಾರ/ಕಂಕಣ/ಪೋಚೆ/ತೋಡೆ/ಪಾಟ್ಲಿ, ಉಂಗುರಗಳು, ಡಾಬು, ಸೊಂಟದ ಪಟ್ಟಿಗಳು, ರನ್ನಿನಜೋಡು, ಗೆಜ್ಜೆಯುಂಗುರ, ಮೀನು, ಮಿಂಚು, ಪಿಲ್ಲಿ, ಕಾಲುಂಗುರ ಮುಂತಾದುವು.
ಸಂಪ್ರದಾಯ
[ಬದಲಾಯಿಸಿ]ಸಂಪ್ರದಾಯದಲ್ಲಿ ಸಂಸ್ಕೃತಿಗೆ ಬಹುಮುಖ್ಯ ಸ್ಥಾನವಿದೆ. ಹಿಂದೂ, ಮುಸ್ಲಿಂ, ಕ್ರೈಸ್ತರಲ್ಲಿನ ವಿವಾಹ ಇನ್ನಿತರ ಕಾರ್ಯಗಳಲ್ಲಿ ಒಂದಷ್ಟು ಬದಲಾವಣೆಗಳಿರುವುದನ್ನು ಕಾಣಬಹುದಾಗಿದೆ. ಹಿಂದು ಮದುವೆಗಳಲ್ಲಿ ವರನ ಕಡೆಯವರು ವಧುವಿಗೆ 'ಬಣ್ಣಬಂಗಾರ'ದ ಬುಟ್ಟಿ ತರುವುದು ವಾಡಿಕೆ. ಅದರಲ್ಲಿ ಗೌರಿಬಳೆ, ಬಳ್ಳಿಕಾಲುಂಗುರ, ಕಾಲ್ಗೆಜ್ಜೆ, ಚೈನು, ಡಾಬು, ಓಲೆ, ಹೂ, ಬಳೆ, ರೇಷ್ಮೇಸೀರೆ, ತಾಳಿ ಮುಂತಾದುವನ್ನು ತಂದರೆ, ಮುಸ್ಲಿಂರು ಝಮ್ಕಿ, ಕೀರನ್ , ಬುಗ್ಗಿ, ವಾಲೆ, ಗಲ್ಲೇರ, ಲವಾ,ಕಿರಾಚಿ ಹಾರ್, ಬಂಗಾರದ ಬಳೆ, ಉಂಗುರಗಳು, ಚಂದ್ರನಾಕಾರದ ತಲೆಬಿಲ್ಲೆ, ಮೂಗುತಿ/ಬುಲಾಕು, ಕಾಲ್ಗೆಜ್ಜೆ ಮುಂತಾದುವನ್ನು ತೊಟ್ಟರೆ, ಕ್ರಿಶ್ಚಿಯನ್ನರು ಉಂಗುರ, ಬಾದಾಮಿಯಾಕಾರದ ತಾಳಿಯ ಮೇಲೆ ಶಿಲುಬೆಯ ಚಿಹ್ನೆ ಇರುತ್ತದೆ. ಚಿನ್ನದ ಸರ, ಬ್ರೇಸ್ಲೇಟ್ ಧರಿಸುವರು. ಇವರು ಬಹುತೇಕ ಹಿಂದುಗಳನ್ನು ಅನುಸರಿಸಿ ಅವರು ಧರಿಸುವ ಒಡವೆಗಳನ್ನೇ ತೊಡುತ್ತಾರೆ.
ಆರೋಗ್ಯವರ್ಧಕ
[ಬದಲಾಯಿಸಿ]ಆಭರಣಗಳು ಮನುಷ್ಯನ ಆರೋಗ್ಯವನ್ನು ಸಂರಕ್ಷಿಸುತ್ತವೆ ಎಂಬ ಮನೋಭಾವವಿದೆ. ಅದರ ಪ್ರಕಾರ-ಓಲೆ ಧರಿಸಿದರೆ, ಅದು ಮಿದುಳನ್ನು ಪ್ರಚೋದಿಸುತ್ತದೆ. ಮೂಗುತಿ ಉಸಿರಿನ ಸಮತೋಲನ ಕಾಪಾಡುತ್ತದೆ. ಕೊರಳ ಹಾರಗಳು ಗಂಟಲನ್ನೂ, ಶ್ವಾಸಕೋಶವನ್ನು ಶುದ್ದಿಗೊಳಿಸುತ್ತವೆ, ಜೊತೆಗೆ ಎದೆಯ ಮೇಲಿನ ನವಿರಾದ ನರಗಳನ್ನು ಪ್ರಚೋದಿಸಿ ರಕ್ತಸಂಚಾರ ನಿಯಂತ್ರಿಸುತ್ತವೆ. ಉಂಗುರಗಳು ಹೃದ್ರೋಗವನ್ನು ತಡೆಯುತ್ತವೆ. ಕೈಕಡಗ, ಸೊಂಟದ ಡಾಬುಗಳು ನಡುವಿಗೆ ಬಲ ನೀಡುವುದರೊಂದಿಗೆ ಜನನೇಂದ್ರಿಯಗಳ ಆರೋಗ್ಯವನ್ನು ವರ್ಧಿಸುತ್ತವೆ. ಕಾಲುಂಗುರ ಹೆಣ್ಣಿನ ಕೋಪವನ್ನು ಶಮನಗೊಳಿಸುತ್ತದೆ. ಚಿನ್ನದ/ಬೆಳ್ಳಿಯ ಆಭರಣಗಳು ಚರ್ಮರೋಗವನ್ನು ತಡೆಯುತ್ತವೆ. ಮನುಷ್ಯನಲ್ಲಿ ರೋಗನಿರೋಧಕ ಶಕ್ತಿಯನ್ನು ಜಾಗೃತ ಗೊಳಿಸುತ್ತವೆ.
ಒಡವೆಗಳ ನಿರ್ಮಾತೃ
[ಬದಲಾಯಿಸಿ]ವಿಶ್ವಕರ್ಮ ಜನಾಂಗದವರು ಆಭರಣಗಳ ತಯಾರಿಕೆಯಲ್ಲಿ ಪ್ರಸಿದ್ದರಾಗಿದ್ದಾರೆ. ವೇದಗಳ ಕಾಲದಲ್ಲಿ ಇವರನ್ನು ಅಕ್ಕಸಾಲಿಗ, ಆಚಾರಿ, ಸುಕರ್ಮಣ, ಹಿರಣ್ಯಕಾರ, ಚೀನಿವಾರ, ಮಣಿಕಾರ ಎಂದು ಕರೆಯಲಾಗಿದೆ. ಅಕ್ಕಸಾಲಿಗರಿಗೆ ವಿಶ್ವಕರ್ಮನೇ ಮೂಲಪುರುಷ. ಇವನಿಗೆ ಐದು ಜನ ಗಂಡು ಮಕ್ಕಳು. ಅವರೆಂದರೆ-ಮಯ, ತೃಷ್ಟ್ಯ, ವಿಶ್ವಜ್ಞ, ಮನು, ಶಿಲ್ಪಿ. ಇವರ ಕೆಲಸಗಳೆಂದರೆ-
ವಿವಿಧ ಶಿಲ್ಪ ಕಾರ್ಯದಲ್ಲಿ ನಿರತನಾದವನು 'ಮಯ'
ಮರಗೆಲಸ ಯಜ್ಞಕಾರ್ಯದಲ್ಲಿ ಪರಿಣಿತನಾದವನು 'ತೃಷ್ಟ್ಯ,'
ಮಾಂಗಲ್ಯ ಆಭರಣಗಳ ತಜ್ಞ ನಾಗಿದ್ದವನು 'ವಿಶ್ವಜ್ಞ',
ಕಬ್ಬಿಣದ ಕೆಲಸದಲ್ಲಿ ಪಾರಂಗತನಾದವನು 'ಮನು'
ವಿಗ್ರಹ ದೇವಾಲಯ ನಿರ್ಮಾಣದಲ್ಲಿ ತೊಡಗಿದವನು 'ಶಿಲ್ಪಿ'
ಹೀಗೆ ಐದು ಮಂದಿಯು ಅವರವರ ವೃತ್ತಿಗಳನ್ನು ಅವಲಂಭಿಸಿದ್ದರು. ಇವರೆಲ್ಲರೂ ಅಕ್ಕಸಾಲಿಗರ ಮೂಲಪುರುಷರು. ಇವರು ಮುಂದೆ 'ಪಾಂಚಾಳ'ರೆಂಬ ಹೆಸರಿನಿಂದ ಕರೆಯಲ್ಪಟ್ಟರು.
ಅಕ್ಕಸಾಲಿಗರ ಸಾಧನ ಸಲಕರಣೆಗಳೆಂದರೆ
[ಬದಲಾಯಿಸಿ]ಅರ, ಅಚ್ಚುವೊಳೆ, ಅಡಸಲ್ಲು, ಐರಣ, ಕುಂಚಗಳು, ಗರಗಸ, ಕಂಬಚ್ಚು, ಗೆಜ್ಜೆಕುಳಿ, ಚಾಣ, ತಂತಿ, ತ್ರಾಸು, ತಿದಿ, ತ್ರಿಜ್ಯ, ಮಾಪಕ, ಬಟ್ಟು, ಮೂಸೆ, ಊದುವ ಕೊಳವೆ, ಓರೆಕಲ್ಲು, ಕಂಪಾಸು, ತೂಕದ ಅಳತೆ, ನೈಟ್ರಿಕ್ ಮತ್ತು ಸಲ್ಫೂರಿಕ್ ಆಮ್ಲ, ಮೈಲುತುತ್ತು, ಗಂಧಕಾಮ್ಲ, ಅರಗು, ಒಪ್ಪದಮರಳು, ಕೆಂಪುಮರಗಳು, ನವಸಾರ, ಪಟಿಕ, ಪೆಟ್ಲುಪ್ಪು, ಬಿಳಿಗಾರ, ರಸಕರ್ಪೂರ, ಸಮುದ್ರದ ನೊರೆಗಳು, ಆಭರಣಗಳ ನಕ್ಷೆ ಮುಂತಾದುವು.
ಆಚರಣೆ
[ಬದಲಾಯಿಸಿ]ಸಂಪ್ರದಾಯದ ಮುಂದುವರೆದ ರೂಪವೇ ಆಚರಣೆ. ಆಚರಣೆಗಳನ್ನು ಅಂತರ್ಗತ ಅಥವಾ ವೈಯಕ್ತಿಕ ಎಂಬುವುದಕ್ಕಿಂತ ಅವು ಸಾಮುದಾಯಿಕವಾದುವು ಎನ್ನಬಹುದು. ಆಚರಣೆಗಳಲ್ಲಿ ಮೂರು ವಿಧಗಳಿವೆ. ಅವೆಂದರೆ-
- ಪ್ರಾರ್ಥನೆ:- ಹಬ್ಬಹರಿದಿನಗಳಲ್ಲಿ ದೇವರ ಆಯುಧಗಳೆಂದು ನಂಬಲಾದ ತ್ರಿಶೂಲ, ಬೆತ್ತ, ಭಲ್ಲೆ, ಕತ್ತಿ, ಗಂಟೆ, ಜಾಗಟೆ ಮುಂತಾದುವುಗಳಲ್ಲಿ ದೇವರನ್ನು ಕಾಣುತ್ತಾರೆ.
- ಅರ್ಪಣೆ:-ಹರಕೆಯ ರೂಪದಲ್ಲಿರುತ್ತವೆ. ಚಿಕ್ಕ ಬೆಳ್ಳಿತೊಟ್ಟಿಲು, ಹಾಲುಗಿಂಡಿ, ನಾಗರುಂಗುರ, ಬೆಳ್ಳಿಹಲ್ಲಿ, ಬೆಳ್ಳಿ ಕಣ್ಣು, ಆಭರಣಗಳು, ದೇವರ ಕಿರೀಟ ಇತ್ಯಾದಿ.
- ಇನ್ನಿತರ ಕ್ರಿಯೆಗಳು:-ಮನೆ ಕಟ್ಟುವ ವೊದಲು ಅಡಿಪಾಯಕ್ಕೆ ಚಿನ್ನ,ಬೆಳ್ಳಿ, ಹವಳದ ಚೂರುಗಳನ್ನು ಹಾಕುವ ಆಚರಣೆ ಇದೆ. ಶುಭ ಸಂದರ್ಭದಲ್ಲಿ ಪಂಚಪಾತ್ರೆ, ಬೆಳ್ಳಿತಟ್ಟೆ,, ಬೆಳ್ಳಿವಿಗ್ರಹ, ಬೆಳ್ಳಿ,ದೀಪಾಲೆ ಕಂಬಗಳು, ಬೆಳ್ಳಿ, ಬಟ್ಟಲು, ಬೆಳ್ಳಿ, ಹೂ ಬುಟ್ಟಿ ಮುಂತಾದುವು.
ಜನಪದ ಪ್ರಕಾರಗಳಲ್ಲಿ ಆಭರಣಗಳು
[ಬದಲಾಯಿಸಿ]ಜನಪದವೆಂಬುದೇ ಒಂದು ವಿಶ್ವಕೋಶವಿದ್ದಂತೆ. ಅದನ್ನು ಯಾರೂ ಸಹ ಸಂಪೂರ್ಣವಾಗಿ ಒಮ್ಮೆಗೆ ಓದಿ ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಅದನ್ನು ಹಲವಾರು ವಿಭಾಗ ಕ್ರಮಗಳನ್ನು ಮಾಡಿಕೊಂಡು ಓದಬೇಕಾಗುತ್ತದೆ. ಆಗ ಮಾತ್ರ ಅದು ಸ್ವಲ್ಪ ಹಿಡಿತಕ್ಕೆ ಸಿಗುತ್ತದೆ. ಅಂತಹ ವಿಭಾಗಕ್ರಮಗಳನ್ನೇ ಪ್ರಕಾರಗಳೆಂದು ಕರೆಯಲಾಗುತ್ತದೆ. ಆಭರಣಗಳಿಗೆ ಸಂಬಂಧಪಟ್ಟಂತೆ ಇರುವ ಜನಪದ ಪ್ರಕಾರಗಳಲ್ಲಿ ಕಥೆಗೆ ಮೊದಲ ಸ್ಥಾನವಿದೆ.
ಜನಪದ ಕಥೆಗಳು
[ಬದಲಾಯಿಸಿ]ವಜ್ರಕುಮಾರ-ಒಂದೂರಲ್ಲಿ ಒಬ್ಬ ಅರಸು. ಅವನಿಗೆ ಏಳುಜನ ಗಂಡುಮಕ್ಕಳು, ಒಬ್ಬ ಹೆಣ್ಣು ಮಗಳು. ಏಳುಜನ ಗಂಡುಮಕ್ಕಳು ಏಳು ರೀತಿಯ ಬಂಗಾರದ ಒಡವೆಗಳನ್ನು ಮಾಡಿಸಿ, ಅವನ್ನು ತಂಗಿಗೆ ತೊಡಿಸಿ, ತಂಗಿಯ ಪ್ರತಿ ತಲೆ ಕೂದಲಿಗೂ ಮುತ್ತು, ಬಂಗಾರ ಪೋಣಿಸುವ ಸಲುವಾಗಿ ಅವನ್ನು ತರಲು ಬೇರೆ ರಾಜ್ಯಕ್ಕೆ ಹೋಗುತ್ತಾರೆ. ಆ ಹುಡುಗಿಯ ಏಳುಜನ ಅತ್ತಿಗೆಯರು ಈ ತಂಗಿಗೆ ನಾನಾ ರೀತಿಯ ಚಿತ್ರಹಿಂಸೆ ಕೊಟ್ಟು, ಅವಳ ಒಡವೆಗಳನ್ನೇಲ್ಲ ಕಿತ್ತುಕೊಂಡು ಅವಳನ್ನು ಮನೆಯಿಂದ ಹೊರಗಟ್ಟಿ ಬಿಡುತ್ತಾರೆ. ಆ ತಂಗಿ ಕಾಡಿಗೋಗಿ ಅಲ್ಲಿ ಸತ್ತಿದ್ದ ರಾಜಕುಮಾರನನ್ನು ಬದುಕಿಸಿ, ಅವನನ್ನೇ ಮದುವೆಯಾಗಿ ವಜ್ರಕುಮಾರನೆಂಬ ಮಗುವನ್ನು ಹಡೆಯುತ್ತಾಳೆ. ನಂತರ ಆ ಮಗುವಿನಿಂದ ತಂಗಿ ಅಣ್ಣಂದಿರು ಮತ್ತೆ ಒಂದಾಗುತ್ತಾರೆ.
ಜನಪದ ಗೀತೆಗಳು
[ಬದಲಾಯಿಸಿ]ತಾಯಿ ಚಾಮುಂಡಿ ವಾಲೆಯ ಬೆಳಕಿಗೆ
ಎಪ್ಪತ್ತೊಂದು ಹುಲ್ಲೆ ಬೆದರಿದೊ
ದೊಡ್ಡಂಚಿನ ಸೀರೆ ಒಡ್ಯಾಣಕೆ ಬಂಗಾರ
ದೊಡ್ಡೇರಿ ಮೇಲೆ ಬರುವೂಳೆ ಚಾಮುಂಡಿ
ವಜ್ರದ ಹೊನ್ನೋಲೆ ಗೆಜ್ಜೆ ತಳಕಿನ ಬುಗುಡಿ
ಗೆಜ್ಜೆ ಗಲಿರೆಂಬೊ ಕಿರುಪಿಲ್ಲಿ ಹಾಕ್ಕೊಂಡು
ಚಾಮುಂಡಿ ಜಗ್ಗುತ್ತಾ ಬೆಟ್ಟ ಇಳಿದಾಳೆ
ದೊರೆಗಳು ಕೈ ಎತ್ತಿ ಮುಗಿದಾರು.
ಗಾದೆಗಳು
[ಬದಲಾಯಿಸಿ]- ಅನ್ನವೆಲ್ಲ ಬ್ರಹ್ಮಮಯ;ಚಿನ್ನವೆಲ್ಲ ವರ್ಣಮಯ,
- ಆಕಳ ಹೊಟ್ಟೇಲಿ ಅಚ್ಚೇರು ಬಂಗಾರ,
- ಒಡವೆಯಿದ್ದು ಬಡವೆ;ಗಂಡನಿದ್ದು ರಂಡೆ,
- ಕಟ್ಟಾಣಿ ಗುಂಡಿಗೆ ಕಲ್ಲು ಹಾಕಿದ ಉಂಗುರ,
- ಬಂದಿ ಇಕ್ಕಿದೋಳ ಬಂದಾನ ನೋಡು; ಕಂಕಣ ಇಕ್ಕಿದೋಳ ಕೈ ನೋಡು.
ಒಗಟುಗಳು
[ಬದಲಾಯಿಸಿ]- ಅಂತಕ್ಕನ ಮಗಳು ಅಂತರದಲ್ಲಿ ಓಲಾಡ್ತಾಳೆ- ಓಲೆ,ಜುಮುಕಿ.
- ಏಳುತಲೆ ಸರ್ಪ ಕಚ್ಚೋದಿಲ್ಲ ತೆಗೆಬಹುದು-ಜಡೆನಾಗರ,
- ಚಿಕ್ಕ ಮನೆಗೆ ಚಿನ್ನದ ಬೀಗ-ನತ್ತು/ಮೂಗುತಿ,
- ಸುತ್ತಾಕಿ ತೆಪ್ಪಗೆ ಕೂರ್ತಾವೆ-ಜಡೆಸರ,
- ಬಗ್ಗಿದರೆ ಬಾಯಿಗೆ ಬರುತ್ತೆ:ಎದ್ದರೆ ಎದೆಗೆ ಹೊಡೆಯುತ್ತೆ-ಮಾಂಗಲ್ಯಸರ.
ನಂಬಿಕೆಗಳು
[ಬದಲಾಯಿಸಿ]- ನವರತ್ನಗಳನ್ನು ಹೆಂಗಸರು ಕನಸಿನಲ್ಲಿ ಕಂಡರೆ ಸಂತಾನಲಾಭವಾಗುತ್ತದೆ.
- ಓಲೆ, ಮೂಗುತಿ, ಮಂಗಳಸೂತ್ರ, ಕಡಗ, ಕಾಲುಂಗುರಗಳು ಮುತೈದೆಯ ಸೌಭಾಗ್ಯದ ಚಿಹ್ನೆಗಳು.
- ವಜ್ರದ ಹರಳು ಮೈಮೇಲಿದ್ದರೆ ಸಾವು-ನೋವು ಸಂಭವಿಸುವುದಿಲ್ಲ.
- ಹರಿನೀಲ ಎಂಬ ಒಡವೆ ಧರಿಸಿದರೆ ಸುಖ,ಸಮೃದ್ದಿ ಸಿಗುತ್ತದೆ.
- ಬಸುರಿ ಹೆಂಗಸು ಆಭರಣಗಳಿಗೆ ಆಶೆ ಪಡಬಾರದು.
ಬಂಗಾರದ ಒಡವೆ ಹಾಗೂ ಗಿಲೀಟು ಒಡವೆಗಳು
[ಬದಲಾಯಿಸಿ]- ಚಿನ್ನಾಭರಣಗಳು ಸತಿಯ ಶೃಂಗಾರವಾದರೆ, ಗಂಡನಿಗೆ ಆಧಾರವೂ ಆಗುತ್ತದೆ. ದೇವರು ಧರಿಸುತ್ತಿದ್ದರೆಂದು ನಂಬಲಾಗಿರುವ ಆಭರಣಗಳ ಪಟ್ಟಿ ಇಂತಿವೆ. ಕರ್ಣಕುಂಡಲ/ಕರ್ಣಿಕೆ, ಸೀಮಂತಮಣಿ, ಮುತ್ತಿನ ಬಲೆ, ಕರ್ಣಪೂರ, ತಾರಾಹಾರ, ಚಂದ್ರಹಾರ, ಮಣಿಹಾರ, ಮುತ್ತಿನಹಾರ, ಮುತ್ತಿನೇಕಾವಳಿ, ಬಾಹುಪೂರ, ತೋಳಬಂದಿ, ಕಂಕಣ, ಬಳೆ, ಕಟೀಸೂತ್ರ, ಕಾಂಚೀಯಧಾಮ, ಒಡ್ಯಾಣ, ಮೇಖಲೆ, ನೂಪುರ, ಅಂದುಗೆ, ತೋಡೆ, ಮುದ್ರಿಕೆ, ಕಂಠೀಹಾರ, ಕೌಸ್ತುಭಮಾಲೆ, ಶಂಖಪತ್ರಕುಂಡಲ, ಸಿಂಹಕಡಗ, ರತ್ನಕುಂಡಲ, ನವರತ್ನದಹಾರ, ಕೊಳವೆಗೆಗ್ಗೆ, ರುಳಿ, ಹೆಣಿಗೆಜೊಂಪೆ, ಮುಂತಾದುವು.
- ಪ್ರಸ್ತುತವಾಗಿ ಹೊಳೆವುದೆಲ್ಲ ಚಿನ್ನವಲ್ಲ ಎಂಬ ಸತ್ಯದ ಅರಿವಾಗಿದೆ. ಚಿನ್ನ ದುಬಾರಿಯಾಗಿರುವುದರಿಂದ, ಕಳ್ಳ ಕಾಕರ ಕಣ್ಣಿಗೆ ಮಣ್ಣೇರೆಚಲು ಗೀಲಿಟು ಒಡವೆಗಳು ಸಹಕಾರಿಯಾಗುತ್ತವೆ. ಚಿನ್ನಾಭರಣಗಳು ನಾರಿಯರ ಅಪ್ರತಿಮ ಸೌಂದರ್ಯಕ್ಕೆ ಮೆರಗು, ಚಾಲನೆ ನೀಡಿದರೂ ನಕಲಿ ಆಭರಣಗಳ ಶೈಲಿಗಳು ಅಧಿಕವಾಗಿವೆ. ಅವುಗಳಲ್ಲಿ ಮುಖ್ಯವಾದುವುಗಳೆಂದರೆ-ಶ್ರೀಗೋಲ್ಡ್ ಕವರಿಂಗ್, ಗ್ಯಾರಂಟೆಡ್ ಗೋಲ್ಡ್, ಬ್ಲಾಕ್ ಮೆಟಲ್, ವೈಟ್ಮೆಟಲ್, ಪ್ಲಾಸ್ಟಿಕ್, ಕಾಗದ, ವೈರೈಟಿ ಮೆಟಲ್, ಬೀಡ್ಸ್, ತಂತಿ, ಮರ, ಗಿಲೀಟಿನ್ ನೆಕ್ಲೆಸ್, ಆಕ್ಸಿಡೆಸ್ಡ, ತಾಮ್ರ, ಕಂಚು, ಇಟಾಲಿಯನ್ ಆರ್ನಮೆಂಟ್ಸ, ಗಾಜುಲೇಪನ , ಮಣ್ಣಿನ ಒಡವೆಗಳು ಮುಂತಾದುವು.
ಪರಿಸಮಾಪ್ತಿ
[ಬದಲಾಯಿಸಿ]- ಹೊನ್ನಿನಿಂದ ತಯಾರಿಸಲ್ಪಡುವ ಆಭರಣಗಳು ಜನಪದರ ಜೀವನದ ಬಹು ಮುಖ್ಯ ಅಂಗಗಳಾಗಿವೆ. ಇವು ತೊಡುವ ಅಲಂಕಾರಿಕ ವಸ್ತು ಮಾತ್ರವಲ್ಲ. ಜನಪದರ ಅಂತ:ಶಕ್ತಿಯ ದ್ಯೋತಕಗಳಾಗಿವೆ. ಆಭರಣಗಳಿಗೆ ಅವುಗಳದೇ ಆದ ಮೌಲ್ಯವಿದೆ. ಆಭರಣಗಳು ಸಮಾಜದಲ್ಲಿ ವ್ಯಕ್ತಿಗೆ ಗೌರವ ಸ್ಥಾನಮಾನ ತಂದು ಕೊಡ ಬಲ್ಲವು. ಆಭರಣಗಳಿಗೆ ಅವುಗಳದೇ ಆದ ಸೆಳೆತವಿದೆ.
- ಆಭರಣಗಳು ಆಪದ್ಧನವಾಗಿಯೂ ಕಾರ್ಯ ನಿರ್ವಹಿಸುತ್ತವೆ. ಆಭರಣಗಳು ಸಂಸ್ಕೃತಿ ನಾಗರಿಕತೆಯ ಪ್ರತಿಬಿಂಬಗಳೆಂದು ನಂಬಲಾಗಿದೆ. ಆಭರಣಗಳು ಆಗಾಗ್ಗೆ ಪ್ರದರ್ಶನಕ್ಕೂ ಒಳಪಡುತ್ತಿರುತ್ತವೆ. ಹೆಣ್ಣೆಂದರೆ ಆಭರಣ ; ಆಭರಣಗಳೆಂದರೆ ಹೆಣ್ಣು ಎಂಬ ಮಾತಿಗೆ ಇಂತಹ ಕಡೆಗಳಲ್ಲಿ ಪುಷ್ಠಿ ಸಿಗುತ್ತವೆ. ಆಭರಣಗಳ ಬೆಲೆ ದಿನೇ ದಿನೇ ದುಬಾರಿಯಾಗುತ್ತಿದ್ದರೂ ಸಹ ಅವನ್ನೂ ಮಾಡಿಸಿ ಕೊಳ್ಳುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದು ಆಭರಣಗಳ ವೈಶಿಷ್ಟ್ಯತೆಯಾಗಿದೆ.
ಆಕರ/ಸಂಶೋಧನ ಗ್ರಂಥಗಳು
[ಬದಲಾಯಿಸಿ]- ಆಭರಣಗಳ ಬಗ್ಗೆ ಸಾಮಾಜಿಕ ದೃಷ್ಟಿಕೋನ - ಡಾ,ದಾನೇಶ್ ಎ. ಚಿಕ್ಕಿ
- ಕನ್ನಡ ಗಾದೆಗಳ ಮಹಾಕೋಶ - ಹು.ಮ. ರಾಮಾರಾಧ್ಯ
- ಕನ್ನಡ ಒಗಟುಗಳು - ಡಾ.ಜೀ.ಶಂ.ಪರಮಶಿವಯ್ಯ
- ಕರ್ನಾಟಕ ಪರಂಪರೆ - ಸಂಪುಟ-೧,೨
- ಜನಪದ ಒಡಪುಗಳು - ಶಂಕರಾನಂದುತ್ಲಾಸರ
- ಪದವವೇ ನಮ್ಮ ಎದೆಯಲಿ - ಎಚ್.ಎಲ್.ನಾಗೇಗೌಡ
- ಮೈಸೂರು ದೇಶದ ವಾಸ್ತುಶಿಲ್ಪ - ಬಿ.ವೆಂಕೋಬರಾವ್
- ಶಿವತತ್ವ ಚಿಂತಾಮಣಿ - ರತ್ನಾಕರವರ್ಣಿ
- ಬಂದಿರೆ ನನ್ನ ಜಡೆವೂಳಗೆ - ಡಾ.ಚಂದ್ರಶೇಖರ ಕಂಬಾರ
- ಭಾರತದ ಖನಿಜಗಳು - ಶ್ರೀಮತಿ ವಾಡಿಯಾ
- ಸೌಭಾಗ್ಯ ಚಿಹ್ನೆಗಳು ಒಂದು ಪರಿವೀಕ್ಷಣ ವರದಿ -ಹೇಮಲತ
- ಹಾಡಿನ ಚೂಡಾಮಣಿ (ಜನಪದ ಗೀತೆಗಳು) - ಟಿ.ಕೇಶವಭಟ್ಟ
ಬಾಹ್ಯ ಕೊಂಡಿ
[ಬದಲಾಯಿಸಿ]- https://kn.wikipedia.org/wiki/ವರ್ಗ:ಆಭರಣಗಳು
- http://mysore-koha.informindia.co.in/cgi-bin/koha/opac-detail.pl?biblionumber=360552[ಶಾಶ್ವತವಾಗಿ ಮಡಿದ ಕೊಂಡಿ]
- http://mysore-koha.informindia.co.in/cgi-bin/koha/opac-search.pl?q=(su:{ಜನಪದ ಉತ್ಸವಗಳು}) Archived 2016-03-05 ವೇಬ್ಯಾಕ್ ಮೆಷಿನ್ ನಲ್ಲಿ.
- http://kanaja.in/archives/52666 Archived 2016-03-06 ವೇಬ್ಯಾಕ್ ಮೆಷಿನ್ ನಲ್ಲಿ.
- https://www.google.co.in/search?q=ಜನಪದ ಆಭರಣಗಳು&espv=2&biw=1600&bih=799&site=webhp&tbm=isch&tbo=u&source=univ&sa=X&ei=mJJmVff4OcGrmAXA3oGAAg&ved=0CHEQ7Ak&dpr=1</ref>
ಉಲ್ಲೇಖಗಳು
[ಬದಲಾಯಿಸಿ]