ಗಿಲ್ಬರ್ಟ್, ವಿಲಿಯಂ ಷ್ವೆಂಕ್
1836-1911. ಇಂಗ್ಲಿಷ್ ನಾಟಕಕಾರ, ಹಾಸ್ಯ ಲೇಖಕ,
ಬದುಕು ಮತ್ತು ಬರಹ
[ಬದಲಾಯಿಸಿ]ತಂದೆ ಕಾದಂಬರಿಕಾರ ವಿಲಿಯಂ ಗಿಲ್ಬರ್ಟ್. ಎಲೆಜ಼ಬೆತ್ ರಾಣಿಯ ಕಾಲದಲ್ಲಿ ಸಾಹಸಿಯಾದ ನಾವಿಕನೆಂದು ರಾಜಮನ್ನಣೆ ಪಡೆದಿದ್ದ ಸರ್ ಹಂಫ್ರಿ ಗಿಲ್ಬರ್ಟ್ನ ವಂಶ ಇವನದು. ವಿಲಿಯಂ ಲಂಡನ್ ನಗರದಲ್ಲಿ 1836 ನವೆಂಬರ್ 18ರಂದು ಜನಿಸಿದ. ಷ್ವೆಂಕ್ ಎಂಬ ಹೆಸರು ಈತನಿಗೆ ಅಜ್ಜಿಯಿಂದ ಬಂದದು. ತಂದೆ ತಾಯಿ ಇಟಲಿಯಲ್ಲಿ ಪ್ರವಾಸ ಮಾಡುತ್ತಿದ್ದ ಸಮಯದಲ್ಲಿ ಡಕಾಯಿತರ ಗುಂಪೊಂದು ಚಿಕ್ಕಮಗುವಾಗಿದ್ದ ವಿಲಿಯಂನನ್ನು ಅಪಹರಿಸಿಕೊಂಡು ಹೋಯಿತು. ಡಕಾಯಿತರ ನಾಯಕನಿಗೆ 25 ಪೌಂಡ್ ಹಣ ಕೊಟ್ಟು ತಂದೆ ಮಗುವನ್ನು ಬಿಡಿಸಿಕೊಂಡು ಬರಬೇಕಾಯಿತು. ಫ್ರಾನ್ಸಿನ ಬೊಲೋನ್ ಈಲಿಂಗ್ಗಳ ಶ್ರೀಮಂತ ಶಾಲೆಗಳಲ್ಲಿ ವಿಧ್ಯಾಭ್ಯಾಸವಾದ ಅನಂತರ ಲಂಡನಿನ ಕಿಂಗ್್ಸ ಕಾಲೇಜಿನಲ್ಲಿ ವಿಲಿಯಂ ವ್ಯಾಸಂಗ ಮುಂದುವರಿಯಿತು. 1863ರಲ್ಲಿ ಲಾ ಪಧವೀದರನಾಗಿ ವಕೀಲವೃತ್ತಿಯನ್ನು ಆರಂಭಿಸಿದ. ಆದರೆ ಕೇಸುಗಳೇ ಸಿಕ್ಕದೆ ಸಂಪಾದನೆಗೆ ಕಷ್ಟವಾಗಿ, ಸಂತೋಷಕರ ಹವ್ಯಾಸವಾಗಿ ಬೆಳೆದುಬಂದಿದ್ದ ಹಾಸ್ಯಲೇಖನ, ಚಿತ್ರಕಲೆಗಳ ಕಡೆ ಹೆಚ್ಚು ಗಮನವನ್ನು ಕೊಡತೊಡಗಿದ. ತಂದೆ ಬರೆದ ಷರ್ಲಿ ಹಾಲ್ ಅಸೈಲಮ್ (1863), ಡಾಕ್ಟರ್ ಆಸ್ಟಿನ್ಸ್ ಗೆಸ್ಟ್ಸ್(೧೮೬೬) ಎಂಬ ಕಾದಂಬರಿಗಳಿಗೆ ಚಿತ್ರಗಳನ್ನು ಬರೆದುಕೊಟ್ಟ. 1861ರಲ್ಲಿ ಫನ್ ಎಂಬ ಹಾಸ್ಯ ಪತ್ರಿಕೆಯಲ್ಲಿ ಗಿಲ್ಬರ್ಟ್ ಬ್ಯಾಬ್ ಎಂಬ ಕಾವ್ಯನಾಮದಲ್ಲಿ ಚಿತ್ರಸಹಿತವಾಗಿ ಕಳಿಸಿದ್ದ ಬಹಳ ಸೊಗಸಾದ ವಿನೋದಕವಿತೆಯೊಂದು ಪ್ರಕಟವಾಗಿ ಎಲ್ಲರ ಗಮನವನ್ನೂ ಸೆಳೆಯಿತು. ಬ್ಯಾಬ್ ಎಂಬುದು ಕವಿಯ ಬಾಲ್ಯದ ಅಡ್ಡ ಹೆಸರು. 1866ರಲ್ಲಿ ಪಂಚ್ ಪತ್ರಿಕೆಗೆ ಕಳಿಸಿದ ಸೊಗಸಾದ ಕಥೆ ನ್ಯಾನ್ಸಿಬೆಲ್ ಎಂಬುದು ತಿರಸ್ಕೃತವಾಯಿತು. ಆದರೆ ಇದೇ ಬಗೆಯ ಕತೆಗಳೆಲ್ಲ ಸೇರಿ ಮುಂದೆ 1869ರಲ್ಲಿ ಪ್ರಕಟವಾಗಿ ಬ್ಯಾಬ್ ಬ್ಯಾಲಡ್ಸ್ ಎಂಬುದು ವಿಖ್ಯಾತ ಕೃತಿಯಾಯಿತು. ಹಾಸ್ಯ ಸಾಹಿತ್ಯ ಕ್ಷಿತಿಜದಲ್ಲಿ ಹೊಸದಾಗಿ ಮೂಡಿದ ತಾರೆ ಎಂದು ಈ ಗ್ರಂಥವನ್ನು ವಿಮರ್ಶಕರು ಕೊಂಡಾಡಿದ್ದಾರೆ. ಈ ಪುಸ್ತಕಕ್ಕೆ ಸಿಕ್ಕ ಪ್ರೋತ್ಸಾಹ ಕೆಲವೇ ವರ್ಷಗಳಲ್ಲಿ ಮೋರ್ ಬ್ಯಾಬ್ ಬ್ಯಾಲಡ್ಸ್ ಎಂಬ ಇನ್ನೊಂದು ಸಂಕಲನ ಬರಲು ಕಾರಣವಾಯಿತು. ಸಾಗ್್ಸ ಆಫ್ ಸವಾಯಾರ್ಡ್ ಎಂಬುದು ಮೂರನೆಯ ಕೃತಿ. 1898ರಲ್ಲಿ ಈ ಮೂರನ್ನೂ ಸೇರಿಸಿ ಇನ್ನೂ ಹಲವು ಚಿತ್ರಗಳನ್ನೂ ಜೋಡಿಸಿ ಸಂಪುಟವಾಗಿ ಪ್ರಕಟಿಸಲಾಯಿತು.
ಆ ವೇಳೆಗೆ ಫನ್ ಪತ್ರಿಕೆಯ ಅಚ್ಚುಮೆಚ್ಚಿನ ಲೇಖಕನೆನಿಸಿದ್ದ ಗಿಲ್ಬರ್ಟ್ ಇಲಸ್ಟ್ರೇಟೆಡ್ ಟೈಮ್ಸ್ ಪತ್ರಿಕೆಯ ನಾಟಕ ವಿಮರ್ಶಕನಾದ. ಒಮ್ಮೆ ಸೇಂಟ್ ಜೇಮ್ಸ್ ರಂಗಮಂದಿರದ ಮಿಸ್ ಹರ್ಬರ್ಟ್ ಲೆಸ್ಸಿ ಎಂಬಾಕೆ ಕ್ರಿಸ್ಮಸ್ ಹಬ್ಬದ ನಾಟ್ಯೋತ್ಸವಕ್ಕಾಗಿ ಹದಿನೈದೇ ದಿನಗಳಲ್ಲಿ ಒಂದು ಹಾಸ್ಯರಸ ಪ್ರಧಾನವಾದ ನಾಟಕವನ್ನು ಬರೆದುಕೊಡಬಲ್ಲವರು ಯಾರಾದರೂ ಸಿಕ್ಕುವರೇ ಎಂದು ರಾಬಟ್ಸ್ ನ್ನನನ್ನು ಕೇಳಿದಳು. ಆತ ಗಿಲ್ಬರ್ಟ್ನನ್ನು ನಾಟಕ ಬರೆದು ಕೊಡಲು ಕೇಳಿದ ಹತ್ತೆ ದಿನಗಳಲ್ಲಿ ಗಿಲ್ಬರ್ಟ್ ಡಲ್ಕಾಮರ ಎಂಬ ವಿಕಟನಾಟಕವನ್ನು ಬರೆದುಕೊಟ್ಟ. ಒಂದೇ ವಾರದಲ್ಲಿ ನಾಟಕವನ್ನು ಅಭ್ಯಾಸಮಾಡಿ ನಾಟ್ಯೋತ್ಸವ ಸಂದರ್ಭದಲ್ಲಿ ಪ್ರದರ್ಶಿಸಿಯೂ ಆಯಿತು. ಅದೇ ಗಿಲ್ಬರ್ಟ್ನ ಮೊದಲ ನಾಟಕ. ಯಾವುದೋ ಗಳಿಗೆಯಲ್ಲಿ ನಾಟಕ ಮಂಡಳಿಯವರಿಗೆ ಕೇವಲ ಮೂವತ್ತು ಪೌಂಡಿಗೆ ಆ ನಾಟಕವನ್ನು ಸಂಪೂರ್ಣ ಹಕ್ಕುಗಳ ಸಮೇತ ಮಾರಿಬಿಟ್ಟ ಗಿಲ್ಬರ್ಟ್ ಅನಂತರ ಕೈಕೈ ಹಿಚುಕಿ ಕೊಳ್ಳಬೇಕಾಯಿತು. ಏಕೆಂದರೆ ಆ ನಾಟಕ ಪ್ರದರ್ಶನದ ಮೇಲೆ ಪ್ರದರ್ಶನ ಕಂಡು ದುಡ್ಡಿನ ಮಳೆ ಸುರಿಸಿತು. 1870ರಲ್ಲಿ ಬಕ್ಸ್ಟನ್ ಎಂಬಾತ ಸರಳ ರಗಳೆಯಲ್ಲಿ ಒಂದು ಸುಖಾಂತನಾಟಕ ಬರೆದುಕೊಡಲು ಕೇಳಿದ. ಅದರ ಫಲ ಕಿನ್ನರ ಕಥಾವಸ್ತುವಿನ ಮೇಲೆ ರಚಿತವಾದ ದಿ ಪ್ಯಾಲೇಸ್ ಆಫ್ ಟ್ರೂತ್ ಎಂಬ ನಾಟಕ. ಕತೆಯ ಹಂದರ ಶಿಥಿಲವಾಗಿದ್ದರೂ ರಚನಾ ಕೌಶಲದಿಂದಾಗಿ ನಾಟಕ ಮನ್ನಣೆ ಪಡೆಯಿತು. ಹೇ ಮಾರ್ಕೆಟ್ ರಂಗಮಂದಿರದಲ್ಲಿ ಕೆಂಡಲ್ ದಂಪತಿಗಳು ಈ ನಾಟಕವನ್ನು ಆಡಿಸಿದರು. ಮರುವರ್ಷ ಮೂರಂಕದ ಮತ್ತೊಂದು ಹರ್ಷ ನಾಟಕ ಷಿಗ್ಮಲಿಯನ್ ಅಂಡ್ ಗೆಲೇಷಿಯಾ. 1873ರಲ್ಲಿ ದಿ ವಿಕೆಡ್ ವರ್ಲ್ಡ್ ಮತ್ತು ದಿ ಹ್ಯಾಪಿ ಲ್ಯಾಂಡ್ ನಾಟಕಗಳು ಬಂದವು. ಆಮೇಲೆ ಗಿಲ್ಬರ್ಟ್ ತನ್ನ ತಂದೆಯ ಮನೋಭಾವವನ್ನು ಅನುಸರಿಸಿ ವಿಕಟಹಾಸ್ಯದ ಇಲ್ಲವೆ ಭಾವಾತಿರೇಕದ ನಾಟಕಗಳನ್ನು ಬರೆಯತೊಡಗಿದ. ಹೀಗೆ ಬಂದ ನಾಲ್ಕು ನಾಟಕಗಳಲ್ಲಿ ಸ್ವೀಟ್ ಹಾಟ್ರ್ಸ್ ಮತ್ತು ಎಂಗೇಜ್ಡ್ ಎಂಬ ನಾಟಕಗಳು ಬಹು ಜನಪ್ರಿಯವಾದವು. ಗದ್ಯ ಮತ್ತು ಪದ್ಯ ಎರಡರಲ್ಲೂ ಅನೇಕ ವಿನೋದನಾಟಕಗಳನ್ನು ಬರೆದು ರಸಿಕರ ಮೆಚ್ಚುಗೆ ಸಂಪಾದಿಸಿದುದಲ್ಲದೆ ಈತ ಫಾಗೆರ್ಟೀಸ್ ಫೇರಿ ಅಂಡ್ ಅದರ್ ಸ್ಟೋರೀಸ್ ಎಂಬ ಹಾಸ್ಯಕಥೆಗಳ ಸಂಕಲನವನ್ನೂ ಪ್ರಕಟಿಸಿದ.
ಈ ನಡುವೆ ಆರ್ಥರ್ ಸಲಿವನ್ ಸಲಿವನ್ ಅರ್ಥರ್ ಎಂಬ ಸಂಗೀತಕಾರನೊಂದಿಗೆ ಆದ ನಿಕಟವಾದ ಸ್ನೇಹ ಗಿಲ್ಬರ್ಟನ ಜೀವನದಲ್ಲಿ ಒಂದು ಮಹತ್ತ್ವಪೂರ್ಣವಾದ ಘಟನೆ. ಇಬ್ಬರೂ ಜೊತೆಗೂಡಿ ಗೀತನಾಟಕಗಳನ್ನು (ಆಪೆರ) ರಚಿಸಿ ಪ್ರದರ್ಶಿಸಬೇಕೆಂದು ಮಾತನಾಡಿ ಕೊಂಡರು. ಈ ಜೋಡಿಯಿಂದ ರಚಿತವಾದ ಮಧುರಗೇಯದ ಸವಾಯ್ ಗೀತ ನಾಟಕಗಳು ಅತ್ಯಂತ ಜನಪ್ರಿಯವಾಗಿ ಕೀರ್ತಿ ಶಿಖರದ ತುದಿಯನ್ನೇರಿದವು. ಗಿಲ್ಬರ್ಟ್ ವಿವಿಧ ಛಂದೋವಿಲಾಸಗಳಲ್ಲಿ ಪ್ರವೀಣ. ಜೊತೆಗೆ ಚತುರವಾದ ವಾಕ್ಸರಣಿಯನ್ನು ಹೆಣೆಯುವುದರಲ್ಲಿ, ಪರಿಹಾಸಯುಕ್ತವಾದ ಸಂದಿಗ್ಧ ಸನ್ನಿವೇಶಗಳನ್ನು ಸೃಷ್ಟಿಸುವುದರಲ್ಲಿ, ವಿರೋಧಾಭಾಸ ಅಲಂಕಾರದ ಮಾತಿನ ಚಟಾಕಿಗಳಲ್ಲಿ ಅದ್ವಿತೀಯ. 19ನೆಯ ಶತಕದ ಇತರ ನಾಟಕಕಾರರು ಸಂಗೀತವನ್ನು ಗೌಣವಾಗಿ ಬಳಸಿಕೊಳ್ಳುತ್ತಿದ್ದರು. ಪಾತ್ರ ಪೋಷಣೆಗೂ ಕಥಾಸಂವಿಧಾನಕ್ಕೂ ಅಭಿನ್ನವಾಗಿ ಸೇರಿಕೊಂಡಂತೆ ಸಂಗೀತವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ ಮೊದಲಿಗರೆಂದರೆ ಗಿಲ್ಬರ್ಟ್ ಮತ್ತು ಸಲಿವನ್. ಕವಿ ಗಿಲ್ಬರ್ಟ್ ಬಳಸಿದ ಛಂದೋವೈಖರಿಯೇ ತನಗೆ ಇಂಥ ರಾಗ ಹೊಂದುತ್ತೆಂಬು ದನ್ನು ಸಲಿವನನಿಗೆ ಸೂಚನೆ ಕೊಡುವಷ್ಟು ಸಂಗೀತಗುಣವನ್ನು ಒಳಗೊಂಡಿರುತ್ತಿತ್ತಂತೆ ಗೀತ-ಸಂಗೀತ ಅಷ್ಟು ಮಧುರವಾಗಿ ಮೇಳವಿಸುತ್ತಿದ್ದುದರಿಂದಲೇ ನಾಟಕಗಳು ರಸಿಕರ ಮೆಚ್ಚುಗೆ ಪಡೆದವು. ಆಂಗ್ಲೋಸ್ಯಾಕ್ಸನ್ ಸಂಸ್ಕೃತಿಯ ಪರಂಪರೆಯಲ್ಲಿ ಬೆಳೆದುಬಂದ ಸಮಾಜಕ್ಕೆ ಈ ಇಬ್ಬರೂ ತಮ್ಮ ನಾಟಕಗಳ ಮೂಲಕ ಹೊಸ ನುಡಿಗಟ್ಟುಗಳನ್ನೂ ಪಾತ್ರಗಳನ್ನೂ ಹೊಸ ಹೊಸ ರಾಗಗಳನ್ನೂ ಕೊಟ್ಟರು. ಇವರ ಕೃತಿಗಳಲ್ಲಿ ಎಚ್. ಎಂ. ಎಸ್. ಪಿನಾಫೋರ್ ಮತ್ತು ದಿ ಮಿಕ್ಯಾಡೊ ಶ್ರೇಷ್ಠವಾದ ಗೀತನಾಟಕಗಳೆಂದು ಹೆಸರಾಗಿವೆ. ಮೊದಲನೆಯದು ನೌಕಾದಳವನ್ನು ಕುರಿತ ವಿಡಂಬನೆ. ಎರಡೂ ವಿಕ್ಟೋರಿಯ ಕಾಲದ ಸಾಮಾಜಿಕ ಶಿಷ್ಟಾಚಾರದ ಢಾಂಬಿಕತೆಯನ್ನು ಅತಿ ಆಡಂಬರ ದಿಂದ ಕೂಡಿದ ಅಪ್ರಾಮಣಿಕತೆಯನ್ನೂ ಕಟುವಾಗಿ ವಿಡಂಬಿಸುವ ನಾಟಕಗಳು. ಅಂದಿನಿಂದ ಇಂದಿನವರೆಗೂ ಈ ನಾಟಕಗಳು ಪ್ರದರ್ಶನವಾದಾಗಲೆಲ್ಲ ರಂಗಮಂದಿರ ತುಂಬ ಜನ ಕಿಕ್ಕಿರಿದು ನೋಡಿ ಆನಂದಿಸುವುದು ಪರಿಪಾಠವಾಗಿದೆ.
ಗಿಲ್ಬರ್ಟ್-ಸಲಿವನ್ ಜೋಡಿ ಮನೆಮಾತಾಯಿತು. ಇಬ್ಬರೂ ಪ್ರತಿಭಾವಂತರೇ. ವೈಯಕ್ತಿಕವಾಗಿ ಸ್ವತಂತ್ರವಾಗಿ ಇಬ್ಬರೂ ತಮ್ಮದೇ ಆದ ಶ್ರೇಷ್ಠಕೃತಿಗಳನ್ನು ರಚಿಸಿದವರೇ. ಆದರೆ ಜೊತೆಗೂಡಿ ರಚಿಸಿದ ಕೃತಿಗಳ ಅಸಾದರಣ ಪ್ರಕಾಶದಲ್ಲಿ ಅವೆಲ್ಲ ಮಸುಕಾಗಿ ಹೋದವು. 1890ರ ಅನಂತರ ಅವರ ಸ್ನೇಹದ ಹಾಲು ಒಡೆಯಿತು. ವೈಮನಸ್ಯ ಬೆಳೆದು ಕೆಲಕಾಲ ಇಬ್ಬರೂ ಬೇರೆಬೇರೆಯಾಗಿ ನಾಟಕಗಳನ್ನು ಬರೆಯ ತೊಡಗಿದರು. ಅವೆಲ್ಲ ಸಪ್ಪೆಯಾದವು. ಮತ್ತೆ ರಾಜಿ ಆಗಿ ಕೆಲವು ನಾಟಕಗಳನ್ನು ಜೊತೆಗೂಡಿ ಬರೆದರು. ಯುಟೋಪಿಯಾ ಅನ್ಲಿಮಿಟೆಡ್ (1893), ದಿ ಗ್ರ್ಯಾಂಡ್ ಡ್ಯೂಕ್ (1896) ಹಿಂದಿನ ನಾಟಕಗಳಷ್ಟು ಯಶಸ್ವಿಯಾಗಲಿಲ್ಲ.
ಗಿಲ್ಬರ್ಟ್ನಿಗೆ ವಿನೋದಶೀಲತೆ ದೈವದತ್ತವಾಗಿ ಬಂದ ಸ್ವಭಾವವಾಗಿತ್ತು. ಅಸಂಖ್ಯಾತ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ಮುಳುಗಿಸಿ ಅವರ ಮನಸ್ಸನ್ನು ಆತ ಉಲ್ಲಾಸಗೊಳಿಸಿದ. ಹಾಸ್ಯಪ್ರಕಾರಕ್ಕೆ ಅವನದೇ ಒಂದು ವಿಶಿಷ್ಟ ಕೊಡುಗೆ. ಅವನ ಹಾಸ್ಯ ತುಂಬ ಸೂಕ್ಷ್ಮ, ಮಾರ್ಮಿಕ, ಸರ್ವದಾ ನಿರ್ದುಷ್ಟವಾದ ಮನೋಧರ್ಮದಿಂದ ಕೂಡಿದುದು. ನಿರ್ಮಲವಾದ ಹಾಸ್ಯರಸಾಯನದಲ್ಲಿ ಹಿತವಾಗಿ ಬೆರೆತ ಸರಸವಾದ ಕಟಕಿಯ ಕಂಪು ಗಿಲ್ಬರ್ಟಿಯನ್ ಹಾಸ್ಯ ಎಂಬ ಹೊಸ ಹೆಸರನ್ನೇ ಸಂಪಾದಿಸಿತು.
1907ರಲ್ಲಿ ಚಕ್ರವರ್ತಿಯ ವರ್ಧಂತ್ಯುತ್ಸವ ಸಂದರ್ಭದಲ್ಲಿ ಗಿಲ್ಬರ್ಟ್ನಿಗೆ ನೈಟ್ ಹುಡ್ ಪ್ರಶಸ್ತಿಯನ್ನು ಕೊಡಲಾಯಿತು. ಯಶಸ್ಸಿನೊಂದಿಗೆ ಅಪಾರ ಹಣವೂ ಬಂದು ಗಿಲ್ಬರ್ಟ್ ಭಾರಿ ಶ್ರೀಮಂತನಾದ. ಭವ್ಯವಾದ ಗ್ಯಾರಿಕ್ ರಂಗಮಂದಿರವನ್ನು ಕಟ್ಟಿಸಿದ. ಹ್ಯಾರೋದಲ್ಲಿ ಸ್ವಂತ ವಾಸಕ್ಕಾಗಿ ಒಂದು ಸುಂದರವಾದ ಮನೆಯನ್ನೂ ಅದರ ಪಕ್ಕದಲ್ಲೇ ಅವನ ಮೆಚ್ಚಿನ ಹವ್ಯಾಸವಾದ ಜ್ಯೋತಿರ್ವಿಜ್ಞಾನದ ಅಧ್ಯಯನಕ್ಕಾಗಿ ಒಂದು ಪುಟ್ಟ ಖಗೋಳ ವೀಕ್ಷಣಾಲಯವನ್ನು ಕಟ್ಟಿಸಿಕೊಂಡ. ಮನೆಯ ಶ್ರೀಮಂತಿಕೆಗೆ ಶೋಭೆ ಎನಿಸುವಂಥ ಒಂದು ವಿಲಾಸಮಯವಾದ ಈಜುಕೊಳವೂ ಉದ್ಯಾನದಲ್ಲಿ ನಿರ್ಮಿತವಾಗಿತ್ತು. ತನಗೆ ಅತ್ಯಂತ ಪ್ರಿಯವಾದ ಆ ಕೊಳವೇ ಮುಂದೆ ತನಗೆ ಮೃತ್ಯುದ್ವಾರವಾಗುವುದೆಂಬುದನ್ನು ಅರಿಯದೆ ಮನೆಗೆ ಬಂದ ಸ್ನೇಹಿತರಿಗೂ ಅತಿಥಿ ಗಳಿಗೂ ಅದನ್ನು ತೋರಿಸುತ್ತ ಗಿಲ್ಬರ್ಟ್ ಹೆಮ್ಮೆ ಪಡುತ್ತಿದ್ದ.
ಒಂದು ಸಾರಿ ಅವನ ಅತಿಥಿಯಾಗಿ ಬಂದ ಮಹಿಳೆಯೊಬ್ಬಳು ಆ ಕೊಳದಲ್ಲಿ ಈಜುತ್ತಿರುವಾಗ ಪ್ರಮಾದವಶಾತ್ ಮುಳುಗುವಾಗ ಅಪಾಯದಲ್ಲಿರುವುದನ್ನು ನೋಡಿದ ಗಿಲ್ಬರ್ಟ್ ಆಕೆಯನ್ನು ರಕ್ಷಿಸಲು ನೀರಿನೊಳಕ್ಕೆ ದುಮುಕಿದ. ಆಕೆಯೇನೋ ಅವನ ಸಹಾಯದಿಂದ ಬದುಕಿದಳು. ಆದರೆ ಆತ ತನ್ನ ಪ್ರಾಣವನ್ನೇ ಉಳಿಸಿಕೊಳ್ಳಲಾರದೆ ಹೋದ. ನಿಪುಣ ಈಜುಗಾರನಾದರೂ ಉದ್ವೇಗದಿಂದಲೊ ದಣಿವಿನಿಂದಲೊ ಈಜಿ ದಡ ಸೇರಲು ಅಸಮರ್ಥನಾದ. 1911 ಮೇ 29ರಂದು ನೀರಿನಲ್ಲಿ ಮುಳುಗಿ ಪ್ರಾಣ ನೀಗಿದ. ಆಗಲೇ ಉಂಟಾದ ಹೃದಯಾಘಾತದಿಂದ ಹಾಗಾಗಿರಬಹುದು ಎಂದು ವೈದ್ಯರು ಶಂಕೆ ಪಟ್ಟರು.