ಆಯುರ್ವೇದ ಚಿಕಿತ್ಸಾ ತತ್ತ್ವಗಳು
ಆಯುರ್ವೇದ ರೀತ್ಯಾ ಚಿಕಿತ್ಸೆ ಮಾಡಬೇಕಾದರೆ ಮತ್ತು ಪರಿಶೋಧನೆ ಮಾಡಬೇಕಾದರೆ ವ್ಯಾಧಿಗಳ ಲಕ್ಷಣಗಳು, ಅವುಗಳ ಆಶ್ರಯ ಸ್ಥಾನಗಳು ಮತ್ತು ರೋಗೋತ್ಪತ್ತಿಗೆ ಕಾರಣಗಳಾದ ತ್ರಿದೋಷಗಳು (ವಾಯು, ಪಿತ್ತ, ಕಫ), ಪಂಚಭೂತಗಳು (ಪೃಥ್ವಿ, ಅಪ್, ತೇಜಸ್ಸು, ವಾಯು, ಆಕಾಶ) ಷಡ್ರಸಗಳು (ಮಧುರ, ಹುಳಿ, ಉಪ್ಪು, ಖಾರ, ಕಹಿ, ಕಷಾಯ), ಸಪ್ತಧಾತುಗಳು (ರಸ, ರಕ್ತ, ಮಾಂಸ ಮೇದಸ್ಸು, ಅಸ್ಥಿ, ಮಜ್ಜ, ಶುಕ್ರ), ವೀರ್ಯಗಳು (ಶೀತ, ಉಷ್ಣ) ವಿಪಾಕ ಮತ್ತು ಪ್ರಭಾವಗಳನ್ನು ವೈದ್ಯನಾದವ ಅರಿತಿರಬೇಕು. ಈ ಪ್ರಕಾರ ವ್ಯಾಧಿಗಳನ್ನು ಚೆನ್ನಾಗಿ ತಿಳಿದುಕೊಂಡು ತಡಮಾಡದೆ ಚಿಕಿತ್ಸಿಸಬೇಕು. ಉಪೇಕ್ಷೆ ಮಾಡಿದರೆ ರೋಗ ದುಸ್ಸಾಧ್ಯ ಅಥವಾ ಅಸಾಧ್ಯವಾಗಿ ಪರಿಣಮಿಸಬಹುದು. ಶ್ರಮವಿಲ್ಲದೆ ವೃಕ್ಷವನ್ನು ಸಣ್ಣ ಸಸಿಯಾಗಿರುವಾಗಲೇ ಹೇಗೆ ಕೀಳಬಹುದೋ ಹಾಗೆ ವ್ಯಾಧಿಯ ಪ್ರಾರಂಭದಲ್ಲೇ ಚಿಕಿತ್ಸೆ ಮಾಡಬೇಕು. ಚಿಕಿತ್ಸೆ ಮಾಡಲು ರಸ, ಉಪರಸಗಳು, ಧಾತು, ಉಪಧಾತು ಮತ್ತು ವನಸ್ಪತಿಗಳ ಉಪಯೋಗಪಡಿಸಿಕೊಳ್ಳುವ ರೀತಿಗಳನ್ನೂ ಆಯುರ್ವೇದದಲ್ಲಿ ವಿವರಿಸಿದೆ. ಈ ವಿಷಯಗಳನ್ನೆಲ್ಲ ವೈದ್ಯ ತಿಳಿದಿರಬೇಕು ಮತ್ತು ಆ ದ್ರವ್ಯಗಳ ದೋಷ, ದೂಷ್ಯ ಮತ್ತು ವೈಷಮ್ಯ ಗುಣಗಳನ್ನೂ ತಿಳಿದಿರಬೇಕು.
ಸಮದೋಷಃ, ಸಮಾಗ್ನಿಶ್ಚ, ಸಮಧಾತು ಮಲಕ್ರಿಯಃ ಪ್ರಸನ್ನಾತ್ಮೇಂದ್ರಿಯಮನಾಃ ಸ್ವಸ್ಥ ಇತ್ಯಭಿಧೀಯತೇ ||
ಆರೋಗ್ಯವಂತನ ಲಕ್ಷಣಗಳು ಹೀಗಿವೆ
[ಬದಲಾಯಿಸಿ]ತ್ರಿದೋಷಗಳು ಒಂದೇ ರೀತಿಯಾಗಿ ಸ್ವಸ್ಥಾನದಲ್ಲಿದ್ದು, ಅವುಗಳ ಸರಿಯಾದ ಕೆಲಸಗಳನ್ನು ಮಾಡಿಕೊಂಡಿರಬೇಕು. ಮಂದ, ವಿಷಮ, ತೀಕ್ಷ್ಣ ಮತ್ತು ಸಮ ಜಠರಾಗ್ನಿಗಳಲ್ಲಿ ಶ್ರೇಷ್ಠವಾದ ಸಮಾಗ್ನಿ ಇರಬೇಕು. ರಸವೇ ಆದಿಯಾದ ಸಪ್ತಧಾತುಗಳ ಮತ್ತು ಮಲಮೂತ್ರ ಬೆವರು ಇವುಗಳ ಕ್ರಿಯೆಗಳು ಸಮನಾಗಿರಬೇಕು. ಸೇವನೆಯಲ್ಲಿ ಹಿತ ಮಿತಗಳಿರಬೇಕು. ಮನಸ್ಸು, ಇಂದ್ರಿಯಗಳು ನಿರ್ಮಲವಾಗಿ ಶುದ್ಧವಾಗಿರಬೇಕು. ಶರೀರ ದೃಢವಾಗಿರಬೇಕು. ಅಂಥವನನ್ನು ಸ್ವಸ್ಥ ಎನ್ನುತ್ತಾರೆ. ಮೇಲೆ ಹೇಳಿರುವುದರಲ್ಲಿ ಏನೇ ವ್ಯತ್ಯಾಸವಾದರೂ ರೋಗೋತ್ಪತ್ತಿಗೆ ಕಾರಣಗಳಾಗುತ್ತವೆ. ನಮ್ಮ ಪೂರ್ವಜನ್ಮದ ಕರ್ಮಫಲಕ್ಕೆ ಅನುಗುಣವಾಗಿಯೂ ಬರುವ ರೋಗಗಳು ಕೆಲವು ಇವೆ. ರೋಗಗಳ ಮೂಲಸ್ಥಾನ ಶರೀರ ಮತ್ತು ಮನಸ್ಸು. ಮನೋಧಿಷ್ಠಾನ ರೋಗಗಳು ಸ್ಥೂಲವಾಗಿ ರಜೋಗುಣ ಮತ್ತು ತಮೋಗುಣಗಳ ಅತಿರೇಕದಿಂದ ಉತ್ಪನ್ನವಾಗುವುವು. ಶರೀರಾಧಿಷ್ಠಾನ ವ್ಯಾಧಿಗಳು ನಿಜ, ಆಗಂತು ಎಂದು ಎರಡು ವಿಧಗಳಾಗಿವೆ. ಸ್ಥೂಲವಾಗಿ ಕಾಲ, ಅರ್ಥ ಕರ್ಮಗಳಲ್ಲಿ ಹೀನ ಯೋಗ, ಅತಿಯೋಗ ಮತ್ತು ಮಿಥ್ಯಾ ರೋಗಗಳು ಅವಕ್ಕೆ ಕಾರಣಗಳು. ವಿಷ ಕ್ರಿಮಿಗಳನ್ನು ಎದುರಿಸಬಲ್ಲ ಶಕ್ತಿ ಕಡಿಮೆಯಾದರೆ ರೋಗೋತ್ಪತ್ತಿಯಾಗುತ್ತದೆ. ಅನೇಕವಾದ ಶಾರೀರಿಕ ವ್ಯಾಧಿಗಳಿಗೆ ಮನಸ್ಸಿನ ಅಸ್ವಸ್ಥತೆಯೂ ಕಾರಣವಾಗಬಹುದು.
ವೈದ್ಯನಾದವ ಇಂದ್ರಿಯ ವಿಷಯಗಳ ಮೇಲೆ ಹೆಚ್ಚು ಆಸಕ್ತನಾಗದೆ, ಸ್ವಾರ್ಥನಾಗದೆ ಪರರಿಗೆ ಹಿತೈಷಿಯಾಗಿ ಪರೋಪಕಾರಿಯಾಗಿರಬೇಕು. ಸತ್ಯವನ್ನೇ ಆಡಬೇಕು. ಕ್ಷಮಾಶೀಲನಾಗಿರಬೇಕು. ಹಿಂಸೆ, ಸುಳ್ಳು ಹೇಳುವುದು, ವ್ಯರ್ಥ ಕಾಲಕಳೆಯುವುದು, ಪರಸ್ತ್ರೀಯರಲ್ಲಿ ಅಭಿಲಾಷೆ ಮುಂತಾದ ಪಾಪಕರ್ಮಗಳನ್ನು ಕಾಯೇನ ವಾಚಾ ಮನಸಾ ಬಿಟ್ಟಿರಬೇಕು.
ಆಯುರ್ವೇದದಲ್ಲಿ ರೋಗಗಳ ಪರೀಕ್ಷೆ, ಔಷಧಿಗಳ ಜ್ಞಾನ, ಚಿಕಿತ್ಸಾಕ್ರಮಗಳು--ಮುಂತಾದ ವೈದ್ಯದ ಎಲ್ಲ ಅಂಗಗಳ ವಿಚಾರದಲ್ಲೂ ತ್ರಿದೋಷಗಳು ವ್ಯಾಪಿಸಿಕೊಂಡಿವೆ. ತ್ರಿದೋಷನ್ಯಾಯದ ಪ್ರತಿಪಾದನಕ್ಕೆ ಮತ್ತು ರೋಗವಿಮರ್ಶೆಗೆ ಆಪ್ತೋಪದೇಶ, ಉಪಮಾನ ಮತ್ತು ಪ್ರತ್ಯಕ್ಷ ಎಂಬ ನಾಲ್ಕು ಸಾಧನಗಳನ್ನು ಹೊಂದಿರಬೇಕು. ಪಂಚಭೂತಗಳ ಸಂಯೋಗದಿಂದ ತ್ರಿದೋಷಗಳೂ ಮತ್ತು ಷಡ್ರಸಗಳೂ ಉತ್ಪತ್ತಿಯಾಗಿವೆ.
ವಾತ, ಪಿತ್ತ, ಕಫ ಎಂಬ ತ್ರಿದೋಷಗಳು ಒಂದೊಂದೂ ಐದು ವಿಧ. ಇವುಗಳು ತಮ್ಮ ಸ್ವಸ್ಥಾನದಿಂದ ಬೇರೆ ಕಡೆಗೆ ಚಲಿಸಿದರೆ ಅಥವಾ ಇದ್ದಲ್ಲಿಯೇ ಚಯಪ್ರಕೋಪ ಪ್ರಶಮನ ಎಂಬ ಅವಸ್ಥೆಗಳನ್ನು ಹೊಂದಿದರೆ ವ್ಯಾಧಿ ಉತ್ಪತ್ತಿಯಾಗುತ್ತದೆ.
ವ್ಯಾಧಿಚಿಕಿತ್ಸೆಯಲ್ಲಿ ಸಂತರ್ಪಣ (ಬೃಂಹಣ) ಮತ್ತು ಅಪತರ್ಪಣ (ಲಂಘನ) ಚಿಕಿತ್ಸೆ ಎಂದು ಎರಡು ವಿಧ. ದೇಹವನ್ನು ಪುಷ್ಟಿ ಮಾಡುವ ವಿಧಾನಕ್ಕೆ ಬೃಂಹಣ ಎಂದೂ ಕೃಶ ಮಾಡುವ ರೀತಿಗೆ ಲಂಘನ ಚಿಕಿತ್ಸೆಯೆಂದೂ ಪರಿಗಣಿಸಲಾಗಿದೆ. ಚಿಕಿತ್ಸೆಯಲ್ಲಿ ಶೋಧನ, ಶಮನ ಎಂದು ಎರಡು ಪ್ರಕಾರಗಳಿವೆ. ಶೋಧನವೆಂದರೆ ಪ್ರಕುಪಿತ ದೋಷಗಳನ್ನು ಹೊರಗೆ ಹೋಗಲಾಡಿಸುವ ಚಿಕಿತ್ಸೆ. ಶೋಧನ ಚಿಕಿತ್ಸಾ ಕ್ರಮದಲ್ಲಿ ನಿರೂಹ, ವಮನ, ಕಾಯವಿರೇಚನ, ಶಿರೋವಿರೇಚನ, ರಕ್ತಮೋಕ್ಷಣಗಳೆಂದು ೫ ವಿಧಕ್ರಮಗಳು. ಶಮನ ಚಿಕಿತ್ಸೆಯೆಂದರೆ ವಿಷಮವಾದ (ಹೆಚ್ಚು ಅಥವಾ ಕಡಿಮೆ ದೋಷಪ್ರಮಾಣಗಳಿದ್ದರೆ) ದೋಷಗಳಿದ್ದರೆ ಮಾತ್ರ ಅವುಗಳನ್ನು ಸಮಪ್ರಮಾಣಕ್ಕೆ ಮತ್ತು ಸಮಸ್ಥಿತಿಗೆ ತರುವುದು. ಇದರಲ್ಲೂ ಪಾಚನ, ದೀಪನ, ಹಸಿವು ಉಂಟು ಮಾಡುವುದು, ಬಾಯಾರಿಕೆ ನಿಗ್ರಹ ಮಾಡುವುದು, ವ್ಯಾಯಾಮ, ಬಿಸಿಲು ಕಾಯಿಸುವುದು, ಶುದ್ಧ ವಾಯುಸೇವನೆ--ಎಂದು ಏಳು ವಿಧ ಚಿಕಿತ್ಸಾ ಕ್ರಮಗಳಿವೆ.
ಬೃಂಹಣ ಚಿಕಿತ್ಸೆಗೆ ಅರ್ಹರು
[ಬದಲಾಯಿಸಿ]ವ್ಯಾಧಿಯಿಂದ ಕ್ಷೀಣರಾದವರು, ತೀಕ್ಷ್ಣೌಷಧ ಸೇವನೆಯಿಂದ ಕೃಶರಾದವರು, ಅತಿ ಮದ್ಯಪಾನ, ಸ್ತ್ರೀಸಂಗ ಶೋಕಗಳಿಂದ ಕೃಶರಾದವರು, ಹೆಚ್ಚು ಭಾರ ಹೊತ್ತು ಕೆಲಸ ಮಾಡುವವರು, ದೂರ ನಡೆಯುವವರು, ಉರಃಕ್ಷತದಿಂದ ಕೃಶರಾದವರು, ವಾತದೋಷಗಳಿಂದ ರೂಕ್ಷರಾಗಿರುವವರು, ದುರ್ಬಲರು, ಗರ್ಭಿಣಿಯರು, ಬಾಣಂತಿಯರು, ಬಾಲಕರು, ವೃದ್ಧರು-ಇವರುಗಳಿಗೆ ಬೃಂಹಣ ಚಿಕಿತ್ಸೆ ಮಾಡತಕ್ಕದ್ದು. ಗ್ರೀಷ್ಮ ಋತುವಿನಲ್ಲಿ ಈ ಚಿಕಿತ್ಸೆ ಮಾಡಿದರೆ ಬಹಳ ಗುಣವುಂಟಾಗುವುದು.
ಲಂಘನ ಚಿಕಿತ್ಸೆಗೆ ಅರ್ಹರು
[ಬದಲಾಯಿಸಿ]ಅತಿಯಾಗಿ ಸ್ಥೂಲರಾದವರು, ಬಲಿಷ್ಠರು, ಪಿತ್ತ ಕಫದೋಷದವರು, ಆಮದೋಷ, ಜ್ವರ, ವಮನ, ಅತಿಸಾರ, ಹೃದ್ರೋಗ, ಮಲಬಂಧ, ಮೈಭಾರ, ಮೇಹರೋಗ, ಊರುಸ್ತಂಭ, ಕುಷ್ಠ, ವಿಸರ್ಪ, ವಿದ್ರಧಿ, ಪ್ಲೀಹ, ಶಿರಸ್ಸು, ಕಿವಿ, ನೇತ್ರ ರೋಗಗಳಿಂದ ಪೀಡಿತರಾದವರು, ಅತಿಸ್ನಿಗ್ಧರು--ಲಂಘನ ಚಿಕಿತ್ಸೆಗೆ ಅರ್ಹರು. ಇದನ್ನು ಹೇಮಂತಋತುವಿನಲ್ಲಿ ಮಾಡಿದರೆ ಹೆಚ್ಚು ಲಾಭಕಾರಿಯಾಗುತ್ತದೆ.
ಬೃಂಹಣ ಚಿಕಿತ್ಸೆಗೆ ದೇವದಾರು, ತಗರ, ಚಂಗಲಕೋಷ್ಠ, ದಶಮೂಲ, ಬಲ, ಅತಿಬಲ ಮತ್ತು ವಿದಾರ್ಯಾದಿ ಔಷಧ ದ್ರವ್ಯಗಳನ್ನೂ ಮಾಂಸ, ಹಾಲು, ತುಪ್ಪ, ಮಧುರವಾದ ಜಿಡ್ಡಾದ ಪದಾರ್ಥಗಳು, ಅಭ್ಯಂಗಸ್ನಾನ, ಹೆಚ್ಚು ನಿದ್ರೆ ಬರಿಸುವ ವಿಧಾನಗಳನ್ನೂ, ಮಾನಸಿಕ ಮತ್ತು ಶಾರೀರಿಕ ಯೋಚನೆಗಳು ಇಲ್ಲದಂತೆ ಮಾಡುವ ವಿಧಾನಗಳನ್ನೂ ಮಾಡಬೇಕು. ಈ ಬೃಂಹಣ ಚಿಕಿತ್ಸೆಯಿಂದ ದೇಹಪುಷ್ಟಿ, ಶಕ್ತಿ ಉಂಟಾಗುತ್ತವೆ.
ತ್ರಿಕಟು, ತ್ರಿಫಲ, ಕಟುಕ ರೋಹಿಣಿ, ಬಜೆ, ಬ್ರಾಹ್ಮಿ, ಲವಣ, ಜೀರಿಗೆ, ವಾದಕ್ಕಿ, ಚಿತ್ರಮೂಲ, ಕೊತ್ತಂಬರಿ, ಅರಿಶಿಣ, ಹೆಗ್ಗುಳ್ಳ, ನೆಲಗುಳ್ಳ, ಶಿಲಾಜಿತು ಎಂಬ ಔಷಧ ದ್ರವ್ಯಗಳೂ ಯವಧಾನ್ಯ, ಮಜ್ಜಿಗೆ, ಜೇನುತುಪ್ಪ ಮುಂತಾದ ಪದಾರ್ಥಗಳೂ ಲಂಘನಚಿಕಿತ್ಸೆಗೆ ಉಪಯುಕ್ತವಾದುವು. ಲಂಘನಚಿಕಿತ್ಸೆಯಿಂದ ಇಂದ್ರಿಯಗಳ ಶುದ್ಧಿ, ಮಲಮೂತ್ರಗಳ ಸರಿಯಾದ ವಿಸರ್ಜನೆ, ಶರೀರ ಲಾಘವ, ಹಸಿವು ಬಾಯಾರಿಕೆ ತೋರುವುವು. ಸರಿಯಾದ ಹೃದಯಕ್ರಿಯೆ, ಶುದ್ಧವಾಗಿ ತೇಗು ಬರುವುದು, ಉತ್ಸಾಹ ಉಂಟಾಗುವುದು, ತೂಕಡಿಕೆ ನಿವಾರಣೆಯಾಗುವುದು, ಹೃದ್ರೋಗ, ಕಾಮಾಲೆ, ಉಬ್ಬಸ, ಕಾಸ, ಗಳಗ್ರಹ ವ್ಯಾಧಿಗಳ ನಿವಾರಣೆಯೂ ಉಂಟಾಗುತ್ತವೆ. ಧಾರಣಾಶಕ್ತಿ, ಜ್ಞಾಪಕಶಕ್ತಿಗಳು ಉಂಟಾಗುತ್ತದೆ; ಮತ್ತು ಅಗ್ನಿದೀಪ್ತಿ ಉಂಟಾಗುತ್ತದೆ.
ಆಗಂತು ರೋಗಗಳಿಗೆ ಸದಸದ್ವಿವೇಕ, ಬುದ್ಧಿಯ ವಿರುದ್ಧ ಆಚರಣೆಯನ್ನು ತ್ಯಾಗ ಮಾಡುವುದು. ಇಂದ್ರಿಯಗಳ ವೈರಾಗ್ಯ, ದೇಶ ಕಾಲಗಳ, ಶಾಸ್ತ್ರ ಸಂಸ್ಕ್ರತಿಗಳ, ಸಜ್ಜನರ ಆಚಾರಗಳನ್ನು ಅನುಸರಿಸುವುದು, ಗ್ರಹಗಳ ಪೂಜೆ, ಹಿರಿಯರು ಗುರುಗಳಲ್ಲಿ ಭಕ್ತಿ ಮತ್ತು ಪೂಜೆ--ಇವೇ ಮುಂತಾದ ರೀತಿಗಳಿಂದ ಮಾನಸಿಕ ಮತ್ತು ಆಗಂತುರೋಗಗಳನ್ನು ಚಿಕಿತ್ಸೆ ಮಾಡತಕ್ಕದ್ದು.
ಮೇಲೆ ಹೇಳಿದ ಚಿಕಿತ್ಸಾ ತತ್ತ್ವಗಳನ್ನು ಆರು ವಿಧಗಳಾಗಿ ವಿಂಗಡಿಸಿದೆ. 1. ಹೇತು ವಿಪರೀತ ಚಿಕಿತ್ಸೆ, 2. ವ್ಯಾಧಿ ವಿಪರೀತ ಚಿಕಿತ್ಸೆ, 3. ಹೇತು--ವ್ಯಾಧಿ ವಿಪರೀತ ಚಿಕಿತ್ಸೆ, 4. ಹೇತುತದರ್ಥಕಾರಿ ಚಿಕಿತ್ಸೆ, 5. ವ್ಯಾಧಿ ತದರ್ಥಕಾರಿ ಚಿಕಿತ್ಸೆ, 6. ಹೇತು-- ವ್ಯಾಧಿ ತದರ್ಥಕಾರಿ ಚಿಕಿತ್ಸೆ.[೧] ಹೇತುವೆಂದರೆ ವ್ಯಾಧಿಗೆ ಕಾರಣೀಭೂತವಾದದ್ದು ಅಥವಾ ಮೂಲಭೂತವಾದದ್ದು. ಹಿತವಲ್ಲದ ಇಂದ್ರಿಯಗಳ ಸಂಘಟಣೆ, ಪ್ರಜ್ಞೆ ತಪ್ಪುವುದು ಮತ್ತು ಕಾಲಾದಿ ಪರಿಪಾಕಗಳಿಂದ ತ್ರಿದೋಷಗಳು ವ್ಯತ್ಯಾಸವಾಗಿ ವ್ಯಾಧಿಯನ್ನು ಉತ್ಪತ್ತಿಮಾಡುತ್ತವೆ. ಆದ್ದರಿಂದ ವ್ಯಾಧಿಗೆ ಮೂಲಭೂತವಾದದ್ದನ್ನು ಪತ್ತೆಮಾಡಿ ಅದಕ್ಕೆ ವ್ಯತಿರಿಕ್ತಗುಣಗಳುಳ್ಳ ಔಷಧ ದ್ರವ್ಯಗಳ ಪ್ರಯೋಗವೇ ಹೇತು ಅಥವಾ ವ್ಯಾಧಿ ವಿಪರೀತ ಚಿಕಿತ್ಸೆ. ವ್ಯಾಧಿಯ ಬರೇ ಲಕ್ಷಣಗಳಿಗೆ ತಕ್ಕಂತೆ ಚಿಕಿತ್ಸೆ ಮಾಡಿದರೆ ಅದು ತದರ್ಥಕಾರಿ ಚಿಕಿತ್ಸೆ ಎನ್ನಿಸಿಕೊಳ್ಳುತ್ತದೆ. ಈ ಪ್ರಯೋಗಗಳಿಂದ ಶಾರೀರಕವಾದ, ಮಾನಸಿಕವಾದ ಮತ್ತು ಬಾಹ್ಯರೋಗಗಳನ್ನು ಗುಣಪಡಿಸಬಹುದು. ರೋಗದ ಪ್ರಾರಂಭದಲ್ಲೇ ಕಾರಣ ತಿಳಿಯದಿದ್ದರೆ ಆಮೇಲೆ ತ್ರಿದೋಷಗಳ ಚಯ, ಪ್ರಕೋಪ, ಪ್ರಶಮನಗಳನ್ನು ತಿಳಿದು, ವ್ಯಾಧಿಯ ಲಕ್ಷಣಗಳನ್ನು ಸರಿಯಾಗಿ ಅರಿತುಕೊಂಡು ಚಿಕಿತ್ಸೆ ಮಾಡಬೇಕು. ಆಯುರ್ವೇದದಲ್ಲಿ ಹೆಚ್ಚಾಗಿ ವ್ಯಾಧಿಗಳ ಲಕ್ಷಣಗಳನ್ನು ಅರಿತು ಚಿಕಿತ್ಸೆ ಮಾಡುವ ರೀತಿ ಹೇಳಿದೆ. ಆದರೆ ಪ್ರಯೋಗಶಾಲೆಯಲ್ಲಿ ಮಾಡುವ ಪರೀಕ್ಷೆಗಳ ಮೂಲಕ ವ್ಯಾಧಿ ಗೊತ್ತುಪಡಿಸಿ (ಹೇತುವನ್ನು ತಿಳಿದು) ಮಾಡುವ ಚಿಕಿತ್ಸಾಕ್ರಮ ಕಡಿಮೆ. ಪ್ರತಿ ರೋಗದ ಹೆಸರು, ಅದನ್ನು ತಿಳಿಯಲು ಹೇಳಿರುವ ಪೂರ್ವರೂಪ ಲಕ್ಷಣಗಳು, ವ್ಯಾಧಿಯ ಪೂರ್ವರೂಪ ಲಕ್ಷಣಗಳು, ವ್ಯಾಧಿಯ ನಿದಾನ, ಉಪಶಯ ಸಂಪ್ರಾಪ್ತಿಗಳನ್ನೂ ಅದಕ್ಕೆ ತಕ್ಕ ಪರಿಹಾರಗಳನ್ನೂ ಪಥ್ಯಾಪಥ್ಯಗಳನ್ನೂ ಅವುಗಳಿಂದ ಉಂಟಾಗಬಹುದಾದ ಅನ್ಯವಿಕಾರಗಳನ್ನೂ ಚೆನ್ನಾಗಿ ಅರಿತು ವ್ಯಾಧಿಯನ್ನು ಗುಣಪಡಿಸಬೇಕು.
ವೈದ್ಯ ರೋಗವನ್ನು ತನ್ನ ಪಂಚೇಂದ್ರಿಯಗಳ ಮೂಲಕ ದರ್ಶನ, ಸ್ಪರ್ಶನ, ಪ್ರಶ್ನೆ ಮುಂತಾದುವುಗಳಿಂದ ಗೊತ್ತುಮಾಡಿ ಚಿಕಿತ್ಸೆ ಮಾಡಬೇಕು. ಇವುಗಳ ಜೊತೆಗೆ ರೋಗಿಯ ನಾಡಿ, ಮಲಮೂತ್ರ ಪರೀಕ್ಷೆ, ನಾಲಗೆ, ಶಬ್ದ, ರೂಪ, ದೃಷ್ಟಿಗಳ ಪರೀಕ್ಷೆ, ಸಮಸ್ಪರ್ಶನಗಳ ಮೂಲಕ ರೋಗವನ್ನು ಪತ್ತೆಮಾಡಿ ಅವುಗಳಿಗೆ ತಕ್ಕಂತೆ ಚಿಕಿತ್ಸೆ ಮಾಡತಕ್ಕದ್ದು.
ವಾತದೋಷದಿಂದ ಉತ್ಪತ್ತಿಯಾದ ರೋಗಗಳಿಗೆ ಸ್ನೇಹಗಳಿಂದ, ಮೃದುವಾದ ಔಷಧಗಳಿಂದ, ವಮನ ವಿರೇಚನಗಳಿಂದ, ಅಭ್ಯಂಗ ಸ್ನಾನದಿಂದ, ಸಿಹಿ ಹುಳಿ ಉಪ್ಪು ರಸಗಳಿಂದ ಉಷ್ಣವೀರ್ಯವುಳ್ಳ ದ್ರವ್ಯಗಳಿಂದ, ಚಿಕಿತ್ಸೆಯನ್ನೂ ಬೃಂಹಣ, ದೀಪನ, ಪಾಚನ ದ್ರವ್ಯಗಳ ಸೇವನೆಯನ್ನೂ ಅನುವಾಸನ ಬಸ್ತಿಯನ್ನೂ ಕೊಡಬೇಕು.
ಪಿತ್ತದೋಷದಿಂದ ಉಂಟಾದ ರೋಗಗಳಿಗೆ ಘೃತಪಾನ, ಮಧುರ ಶೀತವೀರ್ಯವುಳ್ಳ ದ್ರವ್ಯಗಳಿಂದ ವಿರೇಚನ, ಸಿಹಿಕಹಿ ಕಷಾಯ ರಸಗಳುಳ್ಳ ದ್ರವ್ಯಗಳ ಸೇವನೆ, ಸುವಾಸನೆಯಾಗಿ ತಂಪಾಗಿ ಹಿತಕರವಾದ ದ್ರವ್ಯಗಳ ಲೇಪನ, ಆಲಿಂಗನ, ತಂಪಾದ ನೆರಳಿನಲ್ಲಿ ಶೀತಲವಾದ ಶುದ್ಧೋದಕಗಳ ಸೇವನೆ ಮತ್ತು ಹಿತಕರವಾದ ಆಹಾರ ವಿಹಾರಗಳು, ಹೆಚ್ಚಾಗಿ ಹಾಲು ತುಪ್ಪ, ವಿರೇಚನ ಔಷಧಗಳ ಸೇವನೆಯಿಂದ ಚಿಕಿತ್ಸೆ ಮಾಡಬಹುದು.
ಚಿತ್ರ-೧
ಕಫದೋಷದಿಂದ ಉತ್ಪನ್ನವಾದ ರೋಗಗಳಿಗೆ ವಮನ ವಿರೇಚನ ಔಷಧಗಳಿಂದ ಚಿಕಿತ್ಸೆ ಮಾಡಬೇಕು. ಮತ್ತು ರೂಕ್ಷ, ತೀಕ್ಷ್ಣ, ಉಷ್ಣವೀರ್ಯದಿಂದ ಕೂಡಿದ, ಕಟುತಿಕ್ತ ಕಷಾಯ ರಸ ಪ್ರಧಾನವಾದ ಔಷಧದ್ರವ್ಯಗಳು ಮತ್ತು ಆಹಾರ ಸೇವನೆ, ಜೇನುತುಪ್ಪ ಧೂಮಪಾನ ಉಪವಾಸವೇ ಮುಂತಾದ ಮೇದೋಹರ ಔಷಧಗಳನ್ನು ಪ್ರಯೋಗ ಮಾಡಬೇಕು. ಯೋಗಾಭ್ಯಾಸ, ವ್ಯಾಯಾಮ, ಇಂದ್ರಿಯಗಳನಿಗ್ರಹ ಮುಂತಾದವುಗಳನ್ನು ಕಫಜನ್ಯರೋಗಗಳಲ್ಲಿ ಮಾಡತಕ್ಕದ್ದು.
ವಾತ, ಪಿತ್ತ ಮತ್ತು ಕಫ ದೋಷಗಳ ಸಂಸರ್ಗದಿಂದ ಉತ್ಪನ್ನವಾದ ರೋಗಗಳಿಗೆ ಅವಕ್ಕೆ ತಕ್ಕ ರೀತಿಯಲ್ಲಿ ವ್ಯಾಧಿಗಳ ಅವಸ್ಥೆ, ಲಕ್ಷಣಗಳನ್ನು ಸರಿಯಾಗಿ ಅರಿತು ಸೂಕ್ತವಾಗಿ ವಿಧಿವತ್ತಾಗಿ ಚಿಕಿತ್ಸೆ ಮಾಡತಕ್ಕದ್ದು.
ಔಷಧ ದ್ರವ್ಯಗಳನ್ನೂ ಅವುಗಳ ಗುಣಗಳಿಗೆ ಅನುಗುಣವಾಗಿ ತಕ್ಕಂತೆ ವಿಂಗಡಿಸಬಹುದು.
ಚಿತ್ರ-೨
ಮೇಲ್ಕಂಡ ಆಯುರ್ವೇದ ರೀತ್ಯಾ ರೋಗ ನಿರ್ಣಯ ಮತ್ತು ಚಿಕಿತ್ಸಾ ಕ್ರಮಗಳು ಹೇಳಲ್ಪಟ್ಟಿವೆ. ಇವು ತ್ರಿದೋಷಗಳಿಂದ ಅವಲಂಬಿತವಾಗಿವೆ. ಈ ನಿರ್ಧಾರಕ್ರಮಗಳು ನಿಷ್ಕøಷ್ಟ ಜ್ಞಾನದಿಂದ ಕೂಡಿವೆ. ಆದ್ದರಿಂದ ಊಹೆಗಳಿಗೆ ಅವಕಾಶ ಕೊಡದೆ, ಸರಿಯಾಗಿ ರೋಗಗಳ ಲಕ್ಷಣ ಮತ್ತು ಕಾರಣಗಳನ್ನು ಅರಿತುಕೊಂಡು, ಅವಕ್ಕೆ ತಕ್ಕ ರೀತಿಯಲ್ಲಿ ದ್ರವ್ಯೌಷಧಿಗಳನ್ನು ಉಪಯೋಗಿಸಿ ಆಹಾರ ವಿಹಾರಗಳಲ್ಲಿ ಮಿತವಾಗಿದ್ದು ಚಿಕಿತ್ಸೆ ಮಾಡಿದರೆ ಬಾಹ್ಯ, ಶಾರೀರಿಕ ಮತ್ತು ಮಾನಸಿಕ ರೋಗಗಳು ಶಮನವಾಗುತ್ತವೆ. ದೀರ್ಘಕಾಲ ಆಯುಷ್ಯವನ್ನು ಹೆಚ್ಚಿಸಿಕೊಳ್ಳಬಹುದು ಮತ್ತು ಅಕಾಲಮರಣಗಳಿಂದ ಪಾರಾಗಿ ಬಹುಕಾಲ ಬದುಕಿ ದೇಶಗಳನ್ನು ಸಂಪದ್ಭರಿತವನ್ನಾಗಿ ಮಾಡಬಹುದು.
ವೈದ್ಯನ ಲಕ್ಷಣ, ವೈದ್ಯ ನೀತಿ: ಆಳವಾದ ಶಾಸ್ತ್ರಜ್ಞಾನ, ಉತ್ಕೃಷ್ಟವಾದ ಪ್ರತ್ಯಕ್ಷಾನುಭವ, ಹಸ್ತಶುದ್ಧಿ, ವೃತ್ತಿ ಪಾಲನೆಗೆ ಬೇಕಾಗುವ ಉಪಕರಣಾದಿಗಳನ್ನು ಹೊಂದಿರುವುದು, ಸರ್ವೇಂದ್ರಿಯ ಸಂಪನ್ನತೆ, ಶರೀರದ ಪ್ರಾಕೃತಜ್ಞಾನ, ವ್ಯಾಧಿ ಕಾಲದ ಅಪತ್ಸಂದರ್ಭಗಳಲ್ಲಿ ಧೈರ್ಯದಿಂದ ಯುಕ್ತಕರ್ಮಗಳನ್ನು ಮಾಡುವ ಶಕ್ತಿ, ಶುಚಿತ್ವ, ಕಾರ್ಯದಕ್ಷತೆ ಮತ್ತು ಭೂತದಯೆ-ಇವು ವೈದ್ಯನ ಲಕ್ಷಣಗಳು. ಈ ಲಕ್ಷಣಗಳನ್ನುಳ್ಳ ವೈದ್ಯ ರೋಗವನ್ನು ನಿವಾರಿಸಿ ಪ್ರಾಣವನ್ನು ಕಾಪಾಡುತ್ತಾನಾದ್ದರಿಂದ ಆತ ಪ್ರಾಣಾಭಿಸರ ವೈದ್ಯನೆನಿಸುತ್ತಾನೆ. ಇಂಥ ಕಲ್ಯಾಣಗುಣಗಳನ್ನು ಹೊಂದಿರದೆ ರೋಗವನ್ನು ಹಿಂಬಾಲಿಸಿ ಕೊನೆಗೆ ಪ್ರಾಣವನ್ನೇ ನಾಶಮಾಡುವ ರೋಗಾಭಿಸರ ವೈದ್ಯರೆಂಬುವರು ಮತ್ತೊಂದು ವಿಧ. ಇವರಲ್ಲಿ ಸಿದ್ಧಿ ಸಾಧಕರು ಮತ್ತು ಛದ್ಮಚರರೆಂಬುದಾಗಿ ಪುನಃ ಎರಡು ವಿಧ. ಜ್ಞಾನಿಗಳು, ಪ್ರಖ್ಯಾತಪುರುಷರು, ಸಿದ್ಧರು ಮುಂತಾದವರೊಡನೆ ತಮ್ಮ ಸಂಬಂಧವನ್ನು ಮೇಲಿಂದಮೇಲೆ ಹೇಳಿಕೊಳ್ಳುತ್ತ ತಾವೂ ಕುಶಲವೈದ್ಯರೆಂದು ಪ್ರಶಂಸೆ ಮಾಡಿಕೊಳ್ಳುವವರು - ಸಿದ್ಧಿಸಾಧಕರು. ದೊಡ್ಡ ದೊಡ್ಡ ಗ್ರಂಥಗಳು, ಔಷಧಗಳು ಮತ್ತು ಉಪಕರಣಗಳು- ಮುಂತಾದುವನ್ನು ಪ್ರದರ್ಶಿಸುತ್ತ ತಾವು ಶಾಸ್ತ್ರಜ್ಞರೆಂದು ನಟಿಸುವವರು ಛದ್ಮಚರರು. ಇವರಿಬ್ಬರೂ ಅಜ್ಞರೂ ಪ್ರಾಣಘಾತಕರೂ ಆಗಿರುತ್ತಾರೆ.
ಶಾಸ್ತ್ರದೃಷ್ಟಿ ಮತ್ತು ಪ್ರತ್ಯಕ್ಷದೃಷ್ಟಿಗಳೆರಡನ್ನೂ ಹೊಂದಿರುವ ವೈದ್ಯನ ಜ್ಞಾನ ಅಭಿವೃದ್ಧಿಯಾಗುತ್ತದೆ. ಒಂದೇ ಶಾಸ್ತ್ರವನ್ನು ಓದಿರುವವ ಅನೇಕವೇಳೆ ದೃಢ ನಿರ್ಧಾರವನ್ನು ಕೈಗೊಳ್ಳಲು ಅಸಮರ್ಥನಾಗುತ್ತಾನಾದ್ದರಿಂದ ವೈದ್ಯ ಅನೇಕ ಶಾಸ್ತ್ರಗಳನ್ನು ತಿಳಿದವನಾಗಿರಬೇಕು. ಉತ್ತಮ ಸ್ಮರಣಶಕ್ತಿಯುಳ್ಳವನೂ ರೋಗಗಳ ಕಾರಣ ಮತ್ತು ಸ್ವರೂಪವನ್ನು ತಿಳಿದವನೂ ಜಿತೇಂದ್ರಿಯನೂ ಆಪತ್ಕಾಲದಲ್ಲಿ ಧೃತಿಗೆಡದೆ ಚಿಕಿತ್ಸೆ ಮಾಡುವವನೂ ಉತ್ಕೃಷ್ಟ ಔಷಧ ಸಂಗ್ರಹವುಳ್ಳವನೂ ಆದ ವೈದ್ಯ ಮಾತ್ರ ಚಿಕಿತ್ಸೆ ಮಾಡಲು ಅರ್ಹನಾಗುತ್ತಾನೆ.
ರೋಗವೆಂಬ ಕೆಸರಿನಲ್ಲಿ ಬಿದ್ದು ನರಳುತ್ತಿರುವವರನ್ನು ಮೇಲೆತ್ತಲು ವೈದ್ಯ ಸಹಾಯಹಸ್ತ. ಜೀವದಾನಕ್ಕಿಂತ ಮಿಗಿಲಾದ ದಾನ ಬೇರೊಂದಿಲ್ಲ. ಭೂತ ದಯೆಯೇ ವೈದ್ಯವೃತ್ತಿಯ ತಿರುಳು.
ಧರ್ಮಕ್ಕೆ ವಿರೋಧವಲ್ಲದ ರೀತಿಯಲ್ಲಿ ವೈದ್ಯ ವೃತ್ತಿಯನ್ನು ನಡೆಸಬೇಕು. ಅಂತೆಯೇ ತನ್ನ ವೃತ್ತಿಪಾಲನೆಯಲ್ಲಿ ತಾನೂ ಪುರುಷಾರ್ಥಗಳನ್ನು ಸಾಧಿಸಬೇಕು. ಧರ್ಮಜ್ಞರು, ಧರ್ಮಪ್ರತಿಷ್ಠಾಪಕರು, ಅಧ್ಯಾತ್ಮವಿದ್ಯಾಕುಶಲರು, ಗುರು, ಮಾತಾ ಪಿತೃಬಂಧುಗಳು ಮುಂತಾದವರ ಆರೋಗ್ಯವನ್ನು ರಕ್ಷಿಸುವುದು, ಆಯುರ್ವೇದೋಕ್ತ ಆತ್ಮಜ್ಞಾನವನ್ನು ಅನುಷ್ಠಾನಕ್ಕೆ ತರುವುದು-ಇವು ವೃತ್ತಿಯಲ್ಲಿ ಧರ್ಮಸಾಧನೆ. ರಾಜರು, ಧನಿಕರು ಮುಂತಾದವರ ರೋಗವನ್ನು ನಿವಾರಿಸಿ ಅವರು ಸಂತೋಷದಿಂದ ಕೊಡುವ ಧನವನ್ನು ಸಂಗ್ರಹಿಸುವುದು, ತನ್ನನ್ನು, ಆಶ್ರಯಿಸಿದವರನ್ನು ರಕ್ಷಿಸುವುದು, ವೃತ್ತಿಯಲ್ಲಿ ಅರ್ಥಸಾಧನೆ. ವಿದ್ವಜ್ಜನರಿಂದ ಪ್ರಶಂಸೆ, ಸರ್ವರಿಂದಲೂ ಗೌರವ ಮತ್ತು ವೃತ್ತಿಕುಶಲತೆಗಳನ್ನು ಸಂಪಾದಿಸಿ ತನ್ಮೂಲಕ ಇಷ್ಟಾರ್ಥಗಳನ್ನು ಹೊಂದುವುದು ಕಾಮಸಾಧನೆ. ಈ ಮೂರರ ಸಮ್ಯಗನುಷ್ಠಾನದಿಂದ ಜನ್ಮಾಂತ್ಯದಲ್ಲಿ ಬ್ರಹ್ಮಸಾಯುಜ್ಯ-ಇವೇ ವೈದ್ಯನು ಸಾಧಿಸಬೇಕಾದ ವೃತ್ತಿಮೌಲ್ಯಗಳು.
ಎಲ್ಲ ಪ್ರಾಣಿಗಳಲ್ಲಿ ಮೈತ್ರಿ, ಆರ್ತರಲ್ಲಿ ಕರುಣೆ, ಸುಲಭಸಾಧ್ಯವ್ಯಾಧಿಗಳನ್ನುಳ್ಳವರಲ್ಲಿ ಪ್ರೀತಿ, ಮರಣೋನ್ಮುಖರಾದವರಲ್ಲಿ ಉಪೇಕ್ಷೆ ವೈದ್ಯವೃತ್ತಿಯ ನಾಲ್ಕು ಮುಖಗಳಾಗಿವೆ. ಒಳ್ಳೆಯ ಶಾಸ್ತ್ರಜ್ಞಾನ ಮತ್ತು ಪ್ರತ್ಯಕ್ಷಾನುಭವಗಳುಳ್ಳ ವೈದ್ಯ ರೋಗವನ್ನು ಮೊದಲು ನಿರ್ಣಯಿಸಿ ಅನಂತರ ಯುಕ್ತ ಚಿಕಿತ್ಸೆಯನ್ನು ಕೂಡಲೇ ಮಾಡಬೇಕು. ರೋಗವನ್ನು ಸರಿಯಾಗಿ ತಿಳಿಯದೆ ಚಿಕಿತ್ಸೆಯನ್ನು ಪ್ರಾರಂಭಿಸಿ ಯಶಸ್ವೀ ಔಷಧಿಗಳನ್ನು ಕೊಟ್ಟರೂ ಸಿದ್ಧಿ ನಿಶ್ಚಿತವಲ್ಲ. ಜ್ಞಾನವೆಂಬ ದೀಪದ ಬೆಳಕಿನಲ್ಲಿ ಯಾವ ವೈದ್ಯರೋಗಿಯ ಅಂತರಾತ್ಮನನ್ನು ಅರಿತುಕೊಳ್ಳುತ್ತಾನೋ ಆತ ಚಿಕಿತ್ಸೆಯಲ್ಲಿ ವಿಫಲನಾಗುವುದಿಲ್ಲ. ವ್ಯಾಧಿನಿರ್ಣಯ ಮತ್ತು ವೇದನೆಗಳ ನಿವಾರಣೆ ಇವಿಷ್ಟೇ ವೈದ್ಯನ ವೈದ್ಯತ್ವವೇ ಹೊರತು ರೋಗಿಯ ಆಯುಸ್ಸಿಗೆ ವೈದ್ಯ ಪ್ರಭುವಲ್ಲ. ರೋಗಿಯ ಕೊನೆಯುಸಿರಿನವರೆಗೂ ಯುಕ್ತ ಚಿಕಿತ್ಸೆಗಳನ್ನು ಮಾಡಬೇಕು, ಮರಣ ಲಕ್ಷಣಗಳು ಕಂಡುಬರುತ್ತಿರುವ ರೋಗಿಗಳನೇಕರು ದೈವಕೃಪೆಯಿಂದ ಮೃತ್ಯುವನ್ನು ಜಯಿಸುತ್ತಾರೆ.
ಚಿಕಿತ್ಸಾವೃತ್ತಿ ಕೆಲವು ಮೇಳೆ ಧರ್ಮವನ್ನೋ ಕೆಲವು ವೇಳೆ ಮೈತ್ರಿಯನ್ನೋ, ಧನ, ಯಶಸ್ಸು ಅಥವಾ ಕರ್ಮಾಭ್ಯಾಸವನ್ನೋ ಕೊಡುವುದಾದ್ದರಿಂದ ಎಂದಿಗೂ ನಿಷ್ಫಲವಲ್ಲ.
ಚಿಕಿತ್ಸಾ ವೃತ್ತಿಯನ್ನು ಯಾರು ಕೇವಲ ಧನಾರ್ಜನೆಗಾಗಿಯೇ ಮಾಡುತ್ತಾರೋ ಅವರು ಕಾಂಚನರಾಶಿಯನ್ನು ಬಿಟ್ಟು ಮರಳಿನ ರಾಶಿಯನ್ನು ಸಂಪಾದಿಸುತ್ತಾರೆ.
ರೋಗಿಯ ಪರೀಕ್ಷೆ: ಈ ವಿಷಯದಲ್ಲಿ ಆಯುರ್ವೇದ ಶಾಸ್ತ್ರ ಎರಡು ಪದ್ಧತಿಗಳನ್ನು ತಿಳಿಸಿದೆ.
೧. ತ್ರಿವಿಧ ಪರೀಕ್ಷಾಪದ್ಧತಿ-ಕ್ರಿ.ಪೂ. ಸುಮಾರು ೬-೭ನೆಯ ಶತಮಾನದಲ್ಲಿದ್ದನೆಂದು ಹೇಳಲಾಗುವ ಮಹರ್ಷಿ ಪುನರ್ವಸು ಆತ್ರೇಯನಿಂದ ಪ್ರತಿಪಾದಿಸಲ್ಪಟ್ಟ ಆರ್ಷ ಪದ್ಧತಿ. ಆಪ್ತೋಪದೇಶ, ಪ್ರತ್ಯಕ್ಷ ಮತ್ತು ಅನುಮಾನಗಳೆಂಬ ಮೂರು ಮುಖ್ಯ ಪ್ರಮಾಣಗಳನ್ನೇ ಆಧರಿಸಿ ರೋಗಿಯನ್ನು ಪರೀಕ್ಷಿಸುವುದು ಇದರ ಮುಖ್ಯ ಲಕ್ಷಣ. ಶಾಸ್ತ್ರಗ್ರಂಥಗಳ ಅಧ್ಯಯನ, ಗುರುಗಳು, ಪರಿಣತರು ಮತ್ತು ಆಪ್ತರುಗಳ (ರೋಗಕಾಲದಲ್ಲಿ ರೋಗಿಯೂ ಒಬ್ಬ ಆಪ್ತ) ಹೇಳಿಕೆಗಳಿಂದ ರೋಗಜ್ಞಾನವನ್ನು ಪಡೆಯುವುದು ಆಪ್ತೋಪದೇಶ; ವೈದ್ಯ ತನ್ನ ಪಂಚ ಜ್ಞಾನೇಂದ್ರಿಯಗಳನ್ನೇ ಉಪಯೋಗಿಸಿ ರೋಗಿಯ ಶರೀರವನ್ನು ವಿಶದವಾಗಿ ಪರೀಕ್ಷಿಸುವುದರ ಮೂಲಕ ರೋಗಜ್ಞಾನವನ್ನು ಹೊಂದುವುದು ಪ್ರತ್ಯಕ್ಷ ಪರೀಕ್ಷೆಯ ವ್ಯಾಪ್ತಿಗೆ ಒಳಪಡದ ವಿಷಯಗಳನ್ನು, ತರ್ಕ, ಯುಕ್ತಿ, ಪ್ರಶ್ನೆಗಳಿಂದ ತಿಳಿದುಕೊಳ್ಳುವುದು ಅನುಮಾನ--ಈ ಮೂರರಲ್ಲಿ ಪ್ರತ್ಯಕ್ಷ ಪರೀಕ್ಷೆಗೆ ಹೆಚ್ಚು ಪ್ರಾಮುಖ್ಯ.
ಪ್ರತ್ಯಕ್ಷಪರೀಕ್ಞೆಯಲ್ಲಿ ಚಕ್ಷುರಿಂದ್ರಿಯದಿಂದ ಶರೀರದ ವರ್ಣ, ಅಂಗಾಂಗಗಳ ಆಕಾರ ಮತ್ತು ಪ್ರಮಾಣಗಳು ಶ್ರೋತ್ರೇಂದ್ರಿಯದಿಂದ ಸ್ವರ ಮತ್ತು ಅಂಗಾವಯವಗಳಲ್ಲಾಗುವ ಶಬ್ದಗಳೂ ಘ್ರಾಣೇಂದ್ರಿಯದಿಂದ ಗಂಧವೂ ಸ್ಪರ್ಶನೇಂದ್ರಿಯದಿಂದ ಶೀತೋಷ್ಣಾದಿಗುಣಗಳು, ಸ್ಪಂದನಾದಿ ಚೇಷ್ಟೆಗಳು, ರುಜಾ, ಸುಪ್ತಿ ಮುಂತಾದ ವೇದನೆಗಳು ತಿಳಿಯುತ್ತವೆ. ರಸವೇಂದ್ರಿಯವನ್ನೇ ನೇರವಾಗಿ ಪರೀಕ್ಷೆಯಲ್ಲಿ ಉಪಯೋಗಿಸುವುದು ಅನುಚಿತವಾದ ಕಾರಣ ರಸಜ್ಞಾನವನ್ನು ಅನುಮಾನದಿಂದ ತಿಳಿಯಬೇಕು.
ರೋಗದ ಬಗ್ಗೆ ಹೆಚ್ಚು ವಿಷಯಗಳು ಚಕ್ಷುರಿಂದ್ರಿಯ (ದರ್ಶನ) ಮತ್ತು ಸ್ಪರ್ಶನೇಂದ್ರಿಯಗಳ (ಸ್ಪರ್ಶನ) ಪರೀಕ್ಷೆಯಿಂದ ಹಾಗೂ ಪ್ರಶ್ನೆಯಿಂದ ತಿಳಿಯುವುದಾದ್ದರಿಂದ ವಾಗ್ಭಟಾಚಾರ್ಯ (ಕ್ರಿ.ಶ. ೪ನೆಯ ಶತಮಾನ) ಈ ಮೂರರಿಂದಲೇ ರೋಗಿಯನ್ನು ಪರೀಕ್ಷಿಸಬೇಕೆಂದು ಸ್ಪಷ್ಟಪಡಿಸಿದ್ದಾನೆ. ಸುಶ್ರುತಸಂಹಿತೆಯಲ್ಲಿ ಪಂಚೇಂದ್ರಿಯಗಳು ಮತ್ತು ಪ್ರಶ್ನೆಗಳೆಂಬ ಷಡ್ವಿಧ ಪರೀಕ್ಷಾ ಕ್ರಮವನ್ನು ಸೂಚಿಸಲಾಗಿದೆ.
ರೋಗಿಯ ಶರೀರದಲ್ಲಿ ಪರೀಕ್ಷಿಸಿ ನಿರ್ಧರಿಸಬೇಕಾದ ವಿಷಯಗಳನ್ನು ಚರಕ ಸಂಹಿತೆ ವಿವರಿಸುತ್ತದೆ. ರೋಗಿಯ ದೇಹಪ್ರಕೃತಿ, ಸಾರ, ಸಂಹನನ, ಪ್ರಮಾಣಸತ್ವ (ಮನಸ್ಸು) ಸಾತ್ಮ್ಯ (ಹಿತಕರ ಆಹಾರ ವಿಹಾರಗಳು) ಮತ್ತು ಉತ್ಪನ್ನವಾಗಿರುವ ರೋಗ ಇವಿಷ್ಟನ್ನೂ ವೈದ್ಯ ಲಕ್ಷ್ಯವಿಟ್ಟು ಪರೀಕ್ಷಿಸಬೇಕು. ರೋಗವನ್ನು ಪರೀಕ್ಷಿಸುವಾಗ ಅದರ ನಿದಾನ (ಕಾರಣ) ಪೂರ್ವರೂಪ, ರೂಪ, ಉಪಶಯ ಮತ್ತು ಸಂಪ್ರಾಪ್ತಿಗಳೆಂಬ ಪಂಚಲಕ್ಷಣಗಳಿಗೆ ಗಮನ ಕೊಡಬೇಕು.
ಹೀಗೆ ರೋಗಿ ಮತ್ತು ರೋಗಗಳೆರಡರ ಪರೀಕ್ಷೆಯನ್ನೂ ಮಾಡುವುದು ರೋಗ ನಿರ್ಣಯಕ್ಕೆ ಅತ್ಯಾವಶ್ಯಕ.
೨. ಅಷ್ಟ ಸ್ಥಾನಪರೀಕ್ಷಾಪದ್ಧತಿ: ಕ್ರಿ.ಶ. ಹದಿಮೂರನೆಯ ಶತಮಾನದ ಅನಂತರ ಈ ಪದ್ಧತಿ ರೂಢಿಗೆ ಬಂದಿದೆ. ರೋಗಿಯ ನಾಡಿ, ಜಿಹ್ವಾ, ಮಲ, ಮೂತ್ರ, ಶಬ್ದ, ಸ್ಪರ್ಶ ದೃಕ್ (ಕಣ್ಣು) ಮತ್ತು ಆಕೃತಿಗಳೆಂಬ ಎಂಟು ವಿಷಯಗಳ ಪರೀಕ್ಷೆಯಿಂದಲೇ ಸುಲಭವಾಗಿ ರೋಗ ಜ್ಞಾನವನ್ನು ಪಡೆಯಬಹುದೆಂಬುದೇ ಈ ಕ್ರಮದ ಉದ್ದೇಶ. ಪರೀಕ್ಷ್ಯ ಭಾವಗಳಲ್ಲಿ ಮೊದಲನೆಯದಾದ ನಾಡೀಪರೀಕ್ಷೆ ಇದರ ವೈಶಿಷ್ಟ್ಯ.
ಆಯುರ್ವೇದದ ಆರ್ಷಗ್ರಂಥಗಳಾದ ಚರಕ, ಸುಶ್ರುತ ಅಷ್ಟಾಂಗಸಂಗ್ರಹ ಮತ್ತು ಅಷ್ಟಾಂಗಹೃದಯ ಸಂಹಿತೆಗಳಲ್ಲಿ ನಾಡೀಪರೀಕ್ಷಾ ಕ್ರಮ ಕಂಡುಬರುವುದಿಲ್ಲ. ಕ್ರಿ.ಶ. ಹದಿಮೂರನೆಯ ಶತಮಾನದಲ್ಲಿದ್ದ ಶಾಙ್ರ್ಗಧರ ಈ ಕ್ರಮವನ್ನು ತನ್ನ ಗ್ರಂಥದಲ್ಲಿ ಮೊತ್ತಮೊದಲಾಗಿ ವಿವರಿಸಿದ್ದಾನೆ. ಕಾಲಕ್ರಮದಲ್ಲಿ ಈ ಕ್ರಮ ಬಹಳ ಮಾನ್ಯತೆ ಪಡೆಯಿತೆಂಬುದು ಈ ವಿಷಯವನ್ನೇ ಪ್ರತಿಪಾದಿಸುವ ಹಲವಾರು ಗ್ರಂಥಗಳಿರುವುದರಿಂದ ಸ್ಥಿರಪಡುತ್ತದೆ.
ನಾಡೀಪರೀಕ್ಷೆಯೆಂದರೆ ಶರೀರದ ಧಮನಿಗಳಲ್ಲಾಗುತ್ತಿರುವ ಸ್ಪಂದನವನ್ನು (ಮಿಡಿತ) ಪರೀಕ್ಷಿಸುವುದು. ರೋಗಿಯ ಹಸ್ತದ ಅಂಗುಷ್ಠಮೂಲದಲ್ಲಿ ಸುಲಭವಾಗಿ ಸ್ಪರ್ಶಲಭ್ಯವಾಗುವ ಧಮನಿಯ ಸ್ಪಂದನದ ಗತಿ (ರೀತಿ) ಮತ್ತು ವೇಗ (ಸಂಖ್ಯೆ) ಗಳಿಂದ ರೋಗಗಳನ್ನು ನಿರ್ಣಯಿಸಲು ಸಾಧ್ಯವಾಗುತ್ತದೆ. ವೀಣೆಯಲ್ಲಿರುವ ತಂತಿ ಹೇಗೆ ಎಲ್ಲ ರಾಗಗಳನ್ನು ಮಿಡಿಯುತ್ತದೊ ಹಾಗೆಯೇ ನಾಡಿ ಎಲ್ಲ ರೋಗಗಳನ್ನೂ ತಿಳಿಸುತ್ತದೆ. ಇಷ್ಟೇ ಅಲ್ಲದೆ ಆರೋಗ್ಯ, ಗ್ರಹಫಲ, ಭೂತಾವೇಶ, ಮೃತ್ಯುಕಾಲ ಇತ್ಯಾದಿಗಳನ್ನೂ ಸೂಚಿಸುತ್ತದೆ. ನಾಡೀಪರೀಕ್ಷೆ ಗಹನವಾದ ವಿಷಯವೆಂದೂ ದೈವಕøಪೆ, ಗುರೂಪದೇಶ ಮತ್ತು ಸತತಾಭ್ಯಾಸಗಳ ಫಲದಿಂದ ಮಾತ್ರವೇ ಸಿದ್ಧಿಸುವುದೆಂದೂ ತಿಳಿಸಲಾಗಿದೆ. ಆಯುರ್ವೇದ ಶಾಸ್ತ್ರದ ವೈಶಿಷ್ಟ್ಯ ಪೂರ್ಣಪದ್ಧತಿಯಾದ ಇದರಲ್ಲಿ ನಿಷ್ಣಾತರಾದ ವೈದ್ಯರನೇಕರು ಇಂದಿಗೂ ಇದನ್ನು ರೂಢಿಸುತ್ತಿರುವುದು ಇದರ ಮಹತ್ವದ ದ್ಯೋತಕವಾಗಿದೆ. (ಕೆ.ಆರ್.ಎಸ್.)
ಶಸ್ತ್ರಕರ್ಮಾಭ್ಯಾಸ
[ಬದಲಾಯಿಸಿ]ಪೂರ್ವಕಾಲದಲ್ಲಿ ಶಸ್ತ್ರಕರ್ಮಾಭ್ಯಾಸವನ್ನು ಈಗಿನ ಹಾಗೆ ಮೃತದೇಹದ ಮೇಲೆ ಮಾಡುತ್ತಿರಲಿಲ್ಲ. ಫಲಗಳು, ಬಳ್ಳಿಗಳು, ಚರ್ಮಗಳ ಮೇಲೆ ಕತ್ತರಿಸುವುದು, ಸೀಳುವುದು, ಹೊಲೆಯುವುದು ಮುಂತಾದ ಕರ್ಮಗಳನ್ನು ಮಾಡಿಸಿ, ಶಿಷ್ಯನನ್ನು ಯೋಗ್ಯನನ್ನಾಗಿ ಮಾಡುತ್ತಿದ್ದರು. ಹೀಗೆ ಯೋಗ್ಯನನ್ನಾಗಿ ಮಾಡದಿರುವವನಿಗೆ ವೈದ್ಯವೃತ್ತಿಮಾಡಲು ರಾಜನ ಅಪ್ಪಣೆ ಸಿಕ್ಕುತ್ತಿರಲಿಲ್ಲ. ಸೋರೆಕಾಯಿ, ಕುಂಬಳಕಾಯಿ ಮುಂತಾದುವುಗಳಲ್ಲಿ ಕತ್ತರಿಸುವುದು, ಚರ್ಮದ ಚೀಲ, ಪ್ರಾಣಿಗಳ ಮೂತ್ರಾಶಯಗಳಲ್ಲಿ ಸೀಳುವುದು, ರೋಮದಿಂದ ಕೂಡಿದ ಚರ್ಮದಲ್ಲಿ ಲೇಖನ (ಕೆರೆಯುವುದು), ಸತ್ತ ಪಶುಗಳ ರಕ್ತನಾಳಗಳಲ್ಲಿ ಸಿರಾಪ್ಯಧೆ (ರಕ್ತನಾಳ ಕತ್ತರಿಸುವುದು), ಸೂಕ್ಷ್ಮ ಮತ್ತು ದಪ್ಪ ಬಟ್ಟೆ ಅಥವಾ ಚರ್ಮಗಳಲ್ಲಿ ಹೊಲಿಯುವುದು-ಇವನ್ನು ಅಭ್ಯಾಸ ಮಾಡಿಸಲಾಗುತ್ತಿತ್ತು. ದೊಡ್ಡ ಮನುಷ್ಯಾಕಾರದ ಬೊಂಬೆಗಳಲ್ಲಿ ಬಂಧನಗಳನ್ನು (ಬ್ಯಾಂಡೇಜಿಂಗ್) ಮೃದುವಾದ ಮಾಂಸಖಂಡಗಳಲ್ಲಿ ಅಗ್ನಿ ಕರ್ಮ ಮತ್ತು ಕ್ಷಾರಕರ್ಮಗಳನ್ನು ಹೇಳಿಕೊಟ್ಟು ಮಾಡಿಸಲಾಗುತ್ತಿತ್ತು. ಹೀಗೆ ಶಸ್ತ್ರವೈದ್ಯ ರೋಗಗಳಲ್ಲಿ ಮಾಡಬೇಕಾದ ಸಕಲಕೆಲಸಗಳನ್ನು ಇತರ ಪದಾರ್ಥಗಳ ಮೇಲೆ ಮಾಡಿಸಿ ಯೋಗ್ಯನನ್ನಾಗಿ ಮಾಡಿ, ಅನಂತರ ಮನುಷ್ಯರ ಮೇಲೆ ಮಾಡಲು ರಾಜಾಜ್ಞೆ ದೊರಕಿಸುವ ಕ್ರಮ ರೂಢಿಯಲ್ಲಿ ಇದ್ದಿತು. ಶಾಸ್ತ್ರಜ್ಞಾನ ಮತ್ತು ಕರ್ಮನಿಪುಣತೆಗಳನ್ನು ಪಡೆದವನಿಗೆ ವೈದ್ಯನಾಗುವ ಅಧಿಕಾರವಿದ್ದು, ರಾಜನಿಂದ ಅಂಥವನಿಗೆ ಮಾತ್ರ ಅಪ್ಪಣೆ ಸಿಕ್ಕುತ್ತಿದ್ದ ಆ ಕಾಲದಲ್ಲಿ ಶಸ್ತ್ರಕರ್ಮಾಭ್ಯಾಸ ಅತ್ಯುಚ್ಚಮಟ್ಟದಲ್ಲಿ ನಡೆಯುತ್ತಿತ್ತೆಂಬುದರಲ್ಲಿ ಸಂಶಯವಿಲ್ಲ.
ಉಲ್ಲೇಖಗಳು
[ಬದಲಾಯಿಸಿ]