ಅಂತಾರಾಷ್ಟ್ರೀಯ ತೀರುವೆ ಬ್ಯಾಂಕು
Established | 17 May 1930 |
---|---|
ಶೈಲಿ | ಅಂತಾರಾಷ್ಟ್ರೀಯ ಸಂಸ್ಥೆ |
Purpose | ಜಾಗತಿಕ ಕೇಂದ್ರ ಬ್ಯಾಂಕುಗಳ ನಡುವೆ ಸಮನ್ವಯ |
ಸ್ಥಳ | |
Membership | 60 central banks |
Jaime Caruana | |
ಮುಖ್ಯ ಭಾಗ | Board of directors[೧] |
ಅಧಿಕೃತ ಜಾಲತಾಣ | www |
ಅಂತಾರಾಷ್ಟ್ರೀಯ ತೀರುವೆ ಬ್ಯಾಂಕುಹಣಕಾಸಿನ ವಿಷಯವಾಗಿ ಅಂತಾರಾಷ್ಟ್ರೀಯ ಸಹಕಾರವನ್ನು ಏರ್ಪಡಿಸಲು ಶ್ರಮಿಸುತ್ತಿರುವ ಸಂಸ್ಥೆಗಳಲ್ಲಿ 1930 ರಲ್ಲಿ ಸ್ಥಾಪಿಸಲ್ಪಟ್ಟ ಅಂತಾರಾಷ್ಟ್ರೀಯ ತೀರುವೆ ಬ್ಯಾಂಕು (ದಿ ಬ್ಯಾಂಕ್ ಆಫ್ ಇಂಟರ್ನ್ಯಾಷನಲ್ ಸೆಟಲಮೆಂಟ್ಸ) ಮುಖ್ಯವಾದ ಒಂದು ಸಂಸ್ಥೆ.
ಸ್ಥಾಪನೆ
[ಬದಲಾಯಿಸಿ]ವಿವಿಧ ರಾಷ್ಟ್ರಗಳ ಕೇಂದ್ರ ಬ್ಯಾಂಕುಗಳೊಳಗೆ ಪರಸ್ಪರ ಸಹಕಾರದ ಆವಶ್ಯಕತೆ ಆ ಹಿಂದೆಯೇ ಅನೇಕ ಸಂದರ್ಭಗಳಲ್ಲಿ - ಮುಖ್ಯವಾಗಿ 1922-29ರ ವಿದೇಶಿ ವಿನಿಮಯ ದರ ಸ್ತಿಮಿತತೆಯ ಪುನಃಸ್ಥಾಪನೆಯ ಕಾಲದಲ್ಲಿ ಎದ್ದು ಕಾಣುತ್ತಿದ್ದಿತು. ಮೊದಲ ಯುದ್ಧದ ತರುವಾಯ ಸೋತ ಜರ್ಮನಿಯ ಮೇಲೆ ಹೇರಲಾದ ಪರಿಹಾರದ್ರವ್ಯ ತೀರುವೆಯ ಸಂದರ್ಭದಲ್ಲಿ ತಯಾರಿಸಲಾದ ಯಂಗ್ ಯೋಜನೆ ಇತರ ವಿಷಯಗಳ ಜೊತೆಗೆ ಅಂತಾರಾಷ್ಟ್ರೀಯ ತೀರುವೆ ಬ್ಯಾಂಕೊಂದನ್ನು ಸ್ಥಾಪಿಸುವ ಸಲಹೆಯೊಂದನ್ನು ಪೂರ್ಣ ವಿವರಗಳೊಡನೆ ನಮೂದಿಸಿತು. ಈ ಸಲಹೆಯಂತೆ ಕ್ರಮ ಕೈಗೊಳ್ಳಲು ಬೆಲ್ಜಿಯಂ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಬ್ರಿಟನ್ ಮತ್ತು ಅಮೆರಿಕ ಈ ರಾಷ್ಟ್ರಗಳ ಕೇಂದ್ರ ಬ್ಯಾಂಕುಗಳ ಗೌರ್ನರುಗಳು ಹೇಗ್‍ನಲ್ಲಿ ಸಭೆ ಸೇರಿ ಆವಶ್ಯಕ ಕ್ರಮಗಳನ್ನು ಕೈಗೊಂಡರು. ಪುನಃ ರೋಮ್‍ನಲ್ಲಿ ಇವರು ಕಲೆತು ಬ್ಯಾಂಕನ್ನು ಸ್ಥಾಪಿಸುವ ಪ್ರಣಾಳಿಕೆಗೆ 27-02-1930ರಲ್ಲಿ ಸಹಿ ಹಾಕಿದರು. ಸ್ವಿಟ್ಜರ್ಲೆಂಡಿನ ಬಾಸೆಲ್ ಎಂಬಲ್ಲಿ ಅಂತಾರಾಷ್ಟ್ರೀಯ ತೀರುವೆ ಬ್ಯಾಂಕ್ ಹೀಗೆ ಸ್ಥಾಪನೆಯಾಯಿತು. ಸ್ವಿಟ್ಜರ್ಲೆಂಡ್ ಸರ್ಕಾರ ಈ ಬ್ಯಾಂಕಿನ ಅಂತಾರಾಷ್ಟ್ರೀಯ ಅಂತಸ್ತನ್ನು ಕಾಪಾಡಲು ಬೇಕಾದ ಕ್ರಮಗಳುಳ್ಳ ಪ್ರಣಾಳಿಕೆಯೊಂದನ್ನು ಬ್ಯಾಂಕಿಗೆ ಮಂಜೂರು ಮಾಡಿತು.
ಬಂಡವಾಳ
[ಬದಲಾಯಿಸಿ]ಬ್ಯಾಂಕಿನ ಬಂಡವಾಳ 50 ಕೋಟಿ ಸ್ವಿಟ್ಜರ್ಲೆಂಡಿನ ಚಿನ್ನದ ಫ್ರಾಂಕುಗಳು. (ಒಂದು ಚಿನ್ನದ ಫ್ರಾಂಕು = 0.2903 ಗ್ರಾಮುಗಳಷ್ಟು ಚೊಕ್ಕ ಚಿನ್ನ). ಈ ಬಂಡವಾಳ 2 ಲಕ್ಷ ಷೇರುಗಳಾಗಿ ಭಾಗಿಸಲ್ಪಟ್ಟು, ಶೇ. 25 ಭಾಗ ಷೇರು ಬೆಲೆ ಸಂದಾಯವಾದ ಬಂಡವಾಳ (ಪೇಡ್-ಆಪ್ ಕ್ಯಾಪಿಟಲ್) ಆಗಿದೆ. ಮೊದಲು ಬೆಲ್ಜಿಯಂ, ಫ್ರಾನ್ಸ, ಇಂಗ್ಲೆಂಡ್, ಇಟಲಿ, ಜರ್ಮನಿ ಇವುಗಳ 5 ಕೇಂದ್ರ ಬ್ಯಾಂಕುಗಳು ಮತ್ತು ಜಪಾನ್ ಹಾಗೂ ಅಮೆರಿಕದ 2 ಬ್ಯಾಂಕ್ ಕೂಟಗಳೂ ಬಂಡವಾಳ ಹಾಕಿದವು. ಈಗ ರಷ್ಯ ಮತ್ತು ಸ್ಪೇನ್ ಉಳಿದು ಯುರೋಪಿನ ಎಲ್ಲಾ ರಾಷ್ಟ್ರಗಳ ಕೇಂದ್ರ ಬ್ಯಾಂಕುಗಳು ಷೇರು ಬಂಡವಾಳ ಹಾಕಿವೆ. ಜಪಾನಿನ ಷೇರುಗಳನ್ನೂ ಇವು ಕೊಂಡಿವೆ. ಅಂತಾರಾಷ್ಟ್ರೀಯ ತೀರುವೆ ಬ್ಯಾಂಕನ್ನು ಯುರೋಪಿನ ಕೇಂದ್ರ ಬ್ಯಾಂಕುಗಳ ಕೇಂದ್ರಬ್ಯಾಂಕು ಎಂದು ಹೇಳಬಹುದು.
ಆಡಳಿತ
[ಬದಲಾಯಿಸಿ]ಬ್ಯಾಂಕಿನ ಆಡಳಿತ ನಿರ್ವಹಣೆಗೆ ನಿರ್ದೇಶಕರುಗಳ ಮಂಡಳಿ ಇದೆ. ಬ್ಯಾಂಕನ್ನು ಸ್ಥಾಪಿಸಿದ ಕೇಂದ್ರ ಬ್ಯಾಂಕುಗಳ ಗೌರ್ನರುಗಳು ಹಾಗೂ ಇತರ ಕೇಂದ್ರ ಬ್ಯಾಂಕುಗಳ ಗೌರ್ನರುಗಳಿಂದ ಚುನಾಯಿತರಾದವರು ಈ ಬೋರ್ಡಿನ ಸದಸ್ಯರು. ಜೊತೆಗೆ ಈ ಗೌರ್ನರುಗಳು ನಿಯಮಿಸುವ ಕೆಲವು ಸದಸ್ಯರುಗಳೂ ಇರುತ್ತಾರೆ. ನಿರ್ದೇಶಕರುಗಳ ಮಂಡಳಿ ಅಧ್ಯಕ್ಷನೊಬ್ಬನನ್ನು ಚುನಾಯಿಸುವುದು ಮತ್ತು ಜನರಲ್ ಮ್ಯಾನೇಜರನ್ನು ನೇಮಿಸುವುದು.; ಮಂಡಳಿ ಪ್ರತಿ ತಿಂಗಳೂ ಸಭೆ ಸೇರಿ ಬ್ಯಾಂಕು ಕೈಗೊಳ್ಳಬೇಕಾದ ಕಾರ್ಯಾಚರಣೆಯನ್ನು ನಿರ್ದೇಶಿಸುವುದು; ಹೀಗೆ 32 ವರ್ಷಗಳು ವಿವಿಧ ಕೇಂದ್ರ ಬ್ಯಾಂಕುಗಳ ಡೈರೆಕ್ಟರುಗಳು ಕ್ರಮವಾಗಿ ತಿಂಗಳಿಗೊಮ್ಮೆ ಎರಡು ಮೂರು ದಿನಗಳು ಕಲೆತು ವಿಚಾರ ವಿನಿಮಯ ಮಾಡಿಕೊಂಡು ಹಣಕಾಸಿನ ವಿಷಯಗಳ ಬಗ್ಗೆ ಆವಶ್ಯಕ ಕ್ರಮಗಳನ್ನು ಕೈಗೊಳ್ಳುತ್ತಾ ಬಂದಿರುವುದು ಪ್ರಶಂಸನೀಯ ಆರ್ಥಿಕ ಸಹಕಾರ ಸಾಧನೆಯಾಗಿದೆ. ವ್ಯವಹಾರಗಳನ್ನು ನಡೆಸುವ ಬ್ಯಾಂಕಿಂಗ್ ಶಾಖೆ, ಸಂಶೋಧನೆ ನಡೆಸುವ ಹಾಗೂ, ವಾರ್ಷಿಕ ವರದಿ ತಯಾರಿಸುವ ಹಣಕಾಸು ಮತ್ತು ಆರ್ಥಿಕ ಶಾಖೆ ಮತ್ತು ಆಡಳಿತ ಕಾರ್ಯಗಳನ್ನು ನೋಡಿಕೊಳ್ಳುವ ಜನರಲ್ ಸೆಕ್ರೆಟೇರಿಯಟ್ಟು - ಹೀಗೆ ಬ್ಯಾಂಕಿನಲ್ಲಿ ಮೂರು ಮುಖ್ಯ ಶಾಖೆಗಳಿವೆ.
ಕಾರ್ಯಾಚರಣೆಗಳು
[ಬದಲಾಯಿಸಿ]ಬ್ಯಾಂಕಿನ ಕಾರ್ಯಾಚರಣೆಗಳನ್ನು ಎರಡು ಬಗೆಯಾಗಿ ವಿಂಗಡಿಸಬಹುದು. ಸಂಬಂಧಪಟ್ಟವರು ಒಪ್ಪಿಸುವ ಕೆಲವು ಅಂತಾರಾಷ್ಟ್ರೀಯ ಹಣಕಾಸಿನ ವಿಷಯಗಳ ಬಗ್ಗೆ ಧರ್ಮದರ್ಶಿ (ಟ್ರಸ್ಟಿ) ಅಥವಾ ನಿಯೋಗಿ (ಏಜೆಂಟ್) ಆಗಿ ವರ್ತಿಸುವುದು ಮೊದಲನೆಯ ಬಗೆಯ ಕಾರ್ಯಾಚರಣೆ. ಕೇಂದ್ರ ಬ್ಯಾಂಕುಗಳು ಕೇಳಿಕೊಳ್ಳುವ ಬ್ಯಾಂಕು ವ್ಯವಹಾರಗಳನ್ನು ನಡೆಸುವುದು, ಅಂತಾರಾಷ್ಟ್ರೀಯ ಹಣಕಾಸು ವ್ಯವಹಾರಗಳಿಗೆ ಹೆಚ್ಚು ಅನುಕೂಲಗಳನ್ನು ಕಲ್ಪಿಸುವುದು ಮತ್ತು ಕೇಂದ್ರ ಬ್ಯಾಂಕುಗಳೊಳಗೆ ಪರಸ್ಪರ ಸಹಕಾರ ಹೆಚ್ಚಿಸುವುದು - ಇವು ಎರಡನೆ ಬಗೆಯ ಕಾರ್ಯಾಚರಣೆಗಳು. ಸ್ವಂತ ಲೆಕ್ಕಕ್ಕಾಗಲಿ, ಕೇಂದ್ರಬ್ಯಾಂಕುಗಳ ಪರವಾಗಿ ಆಗಲಿ ಚಿನ್ನ ಮಾರುವುದು, ಕೊಳ್ಳುವುದು ಹಾಗೂ ಇಟ್ಟುಕೊಳ್ಳುವುದು; ಕೇಂದ್ರಬ್ಯಾಂಕುಗಳಿಂದ ಸಾಲ ಪಡೆಯುವುದು ಅಥವಾ ಅವುಗಳಿಗೆ ಸಾಲ ಕೊಡುವುದು; ವಿನಿಮಯ ಹುಂಡಿ (ಬಿಲ್ ಆಫ್ ಎಕ್ಸಚೇಂಜ್) ಹಾಗೂ ಇತರ ಅಲ್ಪವಾಯಿದೆ ಪತ್ರಗಳನ್ನು ವಟ್ಟಾ (ಡಿಸ್ಕೌಂಟ್) ಅಥವಾ ಮರುವಟ್ಟಾ (ರೀ ಡಿಸ್ಕೌಂಟ್) ಮಾಡುವುದು, ಕೊಳ್ಳುವುದು ಅಥವಾ ಮಾರುವುದು; ವಿನಿಮಯ ಹಣ ಕೊಳ್ಳುವುದು, ಮಾರುವುದು; ಷೇರುಗಳನ್ನು ಬಿಟ್ಟು ಇತರ ನೆಗೋಷಿಯಬಲ್ ಸೆಕ್ಯೂರಿಟಿಗಳನ್ನು ಕೊಳ್ಳುವುದು ಮತ್ತು ಮಾರುವುದು; ಕೇಂದ್ರ ಬ್ಯಾಂಕುಗಳಿಂದ ಚಾಲ್ತಿ ಅಥವಾ ವಾಯಿದೆ ಠೇವಣಿಗಳನ್ನು ಸ್ವೀಕರಿಸುವುದು; ವಿಶೇಷ ಒಪ್ಪಂದಗಳಿಗೆ ಸಂಬಂಧಪಟ್ಟ ಸರ್ಕಾರಿ ಠೇವಣಿಗಳನ್ನು ಸ್ವೀಕರಿಸುವುದು - ಇತ್ಯಾದಿ ವ್ಯವಹಾರಗಳು ಬ್ಯಾಂಕಿನ ಕಾರ್ಯವ್ಯಾಪ್ತಿಯೊಳಗೆ ಸೇರಿವೆ.
ಬ್ಯಾಂಕು ನಡೆಸುವ ಕಾರ್ಯಾಚರಣೆಗಳು ಸಂಬಂಧಪಟ್ಟ ಕೇಂದ್ರಬ್ಯಾಂಕುಗಳ ಹಣಕಾಸಿನ ನೀತಿಗೆ ಅನುಸಾರವಾಗಿರಬೇಕು. ಅಲ್ಲದೆ, ಬ್ಯಾಂಕು ಯಾವ ಒಂದು ವ್ಯವಹಾರ ಕೈಗೊಳ್ಳುವ ಮುನ್ನ ಸಂಬಂಧಪಟ್ಟ ಎಲ್ಲಾ ಕೇಂದ್ರ ಬ್ಯಾಂಕುಗಳಿಗೂ ಅವುಗಳ ಅಭಿಪ್ರಾಯ ಸೂಚಿಸಲು ಅವಕಾಶ ನೀಡಬೇಕು. ವಿದೇಶೀ ವಿನಿಮಯವನ್ನು ಚುಕ್ತಾ ಮಾಡುವ ಪದ್ಧತಿಯೊಂದನ್ನು ರೂಪಿಸಬೇಕೆಂಬ ಬ್ಯಾಂಕಿನ ಇನ್ನೊಂದು ಮೂಲ ಉದ್ದೇಶ ಗಮನಾರ್ಹವಾದುದು. ಎಲ್ಲಾ ಕೇಂದ್ರ ಬ್ಯಾಂಕುಗಳ ವಿದೇಶಿ ವಿನಿಮಯ ರಿಸರ್ವ್ಗಳ ಒಂದು ಭಾಗವನ್ನು ಅಂತಾರಾಷ್ಟ್ರೀಯ ತೀರುವೆ ಬ್ಯಾಂಕಿನಲ್ಲಿ ಕೇಂದ್ರೀಕೃತಗೊಳಿಸಿ ಪರಸ್ಪರ ಲೇಣೆ - ದೇಣೆಗಳನ್ನು ಸುಲಭ ರೀತಿಯಲ್ಲಿ ನಡೆಸುವಂತೆ ಮಾಡಬೇಕೆಂಬ ಭಾವನೆಯಿಂದ ಸೂಕ್ತಕ್ರಮಗಳನ್ನು ಬ್ಯಾಂಕು ಆರಂಭಿಸಿತು. ಆದರೆ ವಿದೇಶಿ ವಿನಿಮಯ ಕ್ಷೇತ್ರದಲ್ಲಿ ಪ್ರಾಪ್ತವಾದ ವಿಶೇಷ ರಾಷ್ಟ್ರೀಯ ಕಟ್ಟುನಿಟ್ಟುಗಳಿಂದ ಈ ಉದ್ದೇಶವನ್ನು ಸಾಧಿಸಲಾಗಲಿಲ್ಲ. ಬ್ಯಾಂಕಿನ ನಿರ್ಮಾಪಕರು ಸಾಮಾನ್ಯ ಉದ್ದೇಶಗಳನ್ನು ಸ್ಪಷ್ಟವಾಗಿ ವಿವರಿಸಿದರು : ಆದರೆ ಬ್ಯಾಂಕಿನ ರಚನೆ ಹಾಗೂ ಕ್ರಿಯಾ ಮಾರ್ಗಗಳನ್ನು ಅತಿಯಾಗಿ ನಿರ್ಬಂಧಿಸದೆ, ಬದಲಿಸಬಹುದಾದ ಸಂದರ್ಭಗಳಿಗನುಸಾರವಾಗಿ ಹೊಂದಿಕೊಳ್ಳಲು ಅವಕಾಶ ಕಲ್ಪಿಸಿದ್ದರು. ಇದು ಒಳ್ಳೆಯದಾಗಿ ಪರಿಣಮಿಸಿದೆ. ಏಕೆಂದರೆ ಆ ಬ್ಯಾಂಕು ಉದ್ದಕ್ಕೂ ಅನೇಕ ವಿಶೇಷ ಹಾಗೂ ಅನಿರೀಕ್ಷಿತ ಘಟನೆಗಳಿಂದ ಉದ್ಭವಿಸಿದ ಪರಿಸ್ಥಿತಿಗಳಿಗೆ ತಕ್ಕಂತೆ ಹೊಂದಿಕೊಂಡು ಸೇವೆ ಸಲ್ಲಿಸುತ್ತ ಬರಲು ಸಾಧ್ಯವಾಗಿದೆ.
ಸಾಧನೆಗಳು
[ಬದಲಾಯಿಸಿ]ಬ್ಯಾಂಕು ನಿರ್ವಹಿಸಬೇಕಾದ ಪ್ರಥಮ ಹಾಗೂ ಮುಖ್ಯ ಕರ್ತವ್ಯ ಯಂಗ್ ಯೋಜನೆಯನ್ನು ಜಾರಿಗೆ ತರುವುದಕ್ಕೆ ಸಂಬಂಧಿಸಿದ್ದಾಗಿತ್ತು. 1930ರಲ್ಲಿ ಜರ್ಮನಿ ಕೊಟ್ಟ ಪರಿಹಾರ ದ್ರವ್ಯದ ಮಾಸಿಕ ಕಂತುಗಳನ್ನು ಪಾವತಿ ಪಡೆದು ಒಪ್ಪಂದದ ಪ್ರಕಾರ ಹಂಚುವ ವ್ಯವಸ್ಥೆಯನ್ನು ಮಾಡಿತು. ಹೀಗೆ ಕೊಡಬೇಕಾದ ಹಣ ಒದಗಿಸಿಕೊಳ್ಳಲು ಜರ್ಮನಿ ಎತ್ತಿದ ಅಂತಾರಾಷ್ಟ್ರೀಯ ಸಾಲಕ್ಕೆ ನಿಯೋಗಿ ಹಾಗೂ ಧರ್ಮದರ್ಶಿಯಾಗಿ ವರ್ತಿಸಿತು. ಅಲ್ಲದೆ ಈ ವ್ಯವಹಾರಗಳಿಂದ ಉದ್ಭವಿಸಿದ ವರ್ಗಾವಣೆಯ ಸಮಸ್ಯೆಗಳನ್ನು ಎದುರಿಸಲು ಆವಶ್ಯಕವಾದ ಅನೇಕ ಕ್ರಮಗಳನ್ನು ಕೈಗೊಂಡು ಅಂತಾರಾಷ್ಟ್ರೀಯ ಬ್ಯಾಂಕು ಯುರೋಪಿನ ಹಿರಿಯ ಆರ್ಥಿಕ ಸಮಸ್ಯೆಯನ್ನು ಬಿಡಿಸುವುದರಲ್ಲಿ ನೆರವಾಯಿತು. 1931ರಲ್ಲಿ ಪ್ರಾಪ್ತವಾದ ಹಣಕಾಸಿನ ಮುಗ್ಗಟ್ಟಿನ ಪರಿಸ್ಥಿತಿಯನ್ನು ಸುಧಾರಿಸಲು ಯುರೋಪಿನ ರಾಷ್ಟ್ರಗಳು ಮಾಡಿದ ಪ್ರಯತ್ನಗಳಲ್ಲಿ ಬ್ಯಾಂಕು ಮುಖ್ಯ ಪಾತ್ರ ವಹಿಸಿತು. 1933ರಲ್ಲಿ ಜರುಗಿದ ಪ್ರಪಂಚ ಹಣಕಾಸು ಹಾಗೂ ಆರ್ಥಿಕ ಸಮ್ಮೇಳನದ ಕಾರ್ಯಾಚರಣೆಗಳಲ್ಲಿ ಭಾಗವಹಿಸಿತು. ಈ ಸಮ್ಮೇಳನ ಕೇಂದ್ರ ಬ್ಯಾಂಕುಗಳೊಳಗೆ ಬೆಳೆಯಬೇಕಾದ ಸಹಕಾರದ ಆವಶ್ಯಕತೆಯನ್ನು ಒತ್ತಿ ಹೇಳಿದುದೇ ಅಲ್ಲದೆ, ಈ ವಿಷಯದಲ್ಲಿ ಅಂತಾರಾಷ್ಟ್ರೀಯ ತೀರುವೆ ಬ್ಯಾಂಕನ್ನು ಪ್ರಮುಖ ಪಾತ್ರವಹಿಸುವ ಸಾಧನವಾಗಿ ಇಟ್ಟುಕೊಳ್ಳಬೇಕೆಂಬ ಶಿಫಾರಸ್ಸನ್ನು ಮಾಡಿತು. ಆದರೆ 1930ನೆಯ ದಶಕದ ವಾತಾವರಣದಲ್ಲಿ ಬ್ಯಾಂಕು ಈ ನಿಟ್ಟಿನಲ್ಲಿ ಹೆಚ್ಚಿನ ಕಾರ್ಯಸಾಧನೆ ಮಾಡಲಾಗಲಿಲ್ಲ. ಯುದ್ಧಕಾಲದಲ್ಲಿ ಬ್ಯಾಂಕು ಅದರ ಆರ್ಥಿಕ ಹಾಗೂ ನೈತಿಕ ಅಂತಸ್ತನ್ನು ಕಾಪಾಡಿ ಕೊಂಡು ಬಂದುದು ಮುಖ್ಯ ಸಾಧನೆಯೇ ಸರಿ. ಯುದ್ಧದಲ್ಲಿ ತೊಡಗಿದ್ದ ರಾಷ್ಟ್ರಗಳಿಗೆ ಸಂಬಂಧಪಟ್ಟ ಕಾರ್ಯಾಚರಣೆಗಳನ್ನು ಕೈಗೊಳ್ಳುವುದರಲ್ಲಿ ಯಾವ ವಿಧವಾದ ವಿವಾದಕ್ಕೂ ಅವಕಾಶಕೊಡದೆ ಜಾಗರೂಕತೆಯಿಂದ ವರ್ತಿಸಿ, ಯುದ್ಧಕಾಲದಲ್ಲಿ ಆದಷ್ಟೂ ಕಡಿಮೆ ವ್ಯವಹಾರಗಳನ್ನು ನಡೆಯಿಸಿತ್ತಾದರೂ ಎಲ್ಲಾ ಸದಸ್ಯ ರಾಷ್ಟ್ರಗಳ ಮಾನ್ಯತೆಯನ್ನು ಉಳಿಸಿಕೊಂಡು ಯುದ್ಧಕಾಲದಿಂದ ಯಶಸ್ವಿಯಾಗಿ ಹೊರಬಂದಿತು. ಯುದ್ಧಾನಂತರ ಪುನಾರಚನೆಯ ಭಾಗವಾಗಿ ಅಂತಾರಾಷ್ಟ್ರೀಯ ವಿನಿಮಯ ನಿಧಿ ಮತ್ತು ಪುನಾರಚನೆ ಹಾಗೂ ಅಭಿವೃದ್ಧಿಯ ಅಂತಾರಾಷ್ಟ್ರೀಯ ಬ್ಯಾಂಕು, ಈ ಎರಡೂ ಸಂಸ್ಥೆಗಳನ್ನು ಸ್ಥಾಪಿಸಿದ ಬ್ರೆಟನ್ವುಡ್ಸ ಸಮ್ಮೇಳನ ಅಂತಾರಾಷ್ಟ್ರೀಯ ತೀರುವೆ ಬ್ಯಾಂಕನ್ನು ಮುಚ್ಚುವಂತೆ ಶಿಫಾರಸ್ಸು ಮಾಡಿತ್ತು. ಆದರೆ ಸಹಜ ಸ್ಥಿತಿಗಳ ಪುನಃಪರಿಶೀಲನೆಯ ಅನಂತರ ಈ ಸಂಸ್ಥೆಯನ್ನು ಮುಂದುವರಿಸುವುದು ಪ್ರಯೋಜನಕರವೆಂದು ತೀರ್ಮಾನಿಸಲಾಯಿತು. ಅದರಂತೆ ತೀರುವೆ ಬ್ಯಾಂಕು ಮತ್ತು ಅಂತಾರಾಷ್ಟ್ರೀಯ ವಿನಿಮಯ ನಿಧಿ, ಹಾಗೂ ವಿಶ್ವ ಬ್ಯಾಂಕು ಇವುಗಳೊಳಗೆ ವಿಶೇಷ ಬಾಂಧವ್ಯ ಕ್ರಮವಾಗಿ ಏರ್ಪಾಟಾಗಿದೆ. ತೀರುವೆ ಬ್ಯಾಂಕಿನ ವಾರ್ಷಿಕ ಸಭೆಗೆ ಉಳಿದೆರಡೂ ಸಂಸ್ಥೆಗಳು ಪ್ರತಿನಿಧಿಗಳನ್ನು ಕಳಿಸುವುವು. ಹಾಗೂ ಈ ಎರಡೂ ಸಂಸ್ಥೆಗಳ ವಾರ್ಷಿಕ ಸಭೆಗೆ ತೀರುವೆ ಬ್ಯಾಂಕು ಪ್ರತಿನಿಧಿಗಳನ್ನು ಕಳುಹಿಸುವುದು. ಇತ್ತೀಚಿನ ಯುದ್ಧೋತ್ತರ ಕಾಲದಲ್ಲಿ ತೀರುವೆ ಬ್ಯಾಂಕು ಯುರೋಪಿನ ಪುನಾರಚನೆಗೆ ಸಂಬಂಧಿಸಿದ ಅನೇಕ ಅಂತಾರಾಷ್ಟ್ರೀಯ ಹಣಕಾಸಿನ ವ್ಯವಹಾರಗಳನ್ನು ಕೈಗೊಂಡಿದೆ. 1948ರಲ್ಲಿ ಸ್ಥಾಪನೆಯಾದ ಯುರೋಪಿನ ಆರ್ಥಿಕ ಸಹಕಾರ ವ್ಯವಸ್ಥೆಯ (ಒ.ಇ.ಇ.ಸಿ) ಹಾಗೂ ಯುರೋಪಿನ ದೇಣೆ ಒಕ್ಕೂಟದ (ಇ.ಪಿ.ಯು) ನಿಯೋಗಿಯಾಗಿ ಅಂತಾರಾಷ್ಟ್ರೀಯ ತೀರುವೆ ಬ್ಯಾಂಕು ಹಣಕಾಸು ಹಾಗೂ ವಿದೇಶಿ ವಿನಿಮಯಕ್ಕೆ ಸಂಬಂಧಿಸಿದ ಅನೇಕ ಕಾರ್ಯಾಚರಣೆಗಳನ್ನು ನಡೆಸಿತು. ಯುರೋಪಿನ ಕಲ್ಲಿದ್ದಲು ಮತ್ತು ಉಕ್ಕಿನ ಸಮುದಾಯದ ಪರವಾಗಿಯೂ ಈಗ ರೂಪುಗೊಳ್ಳುತ್ತಿರುವ ಪಾಶ್ಚಾತ್ಯ ಯುರೋಪ್ ರಾಷ್ಟ್ರಗಳ ಆರ್ಥಿಕ ಸಂಘಗಳ ಪರವಾಗಿಯೂ ಅನೇಕ ಹಣಕಾಸಿನ ವ್ಯವಹಾರಗಳನ್ನು ನಡೆಸುತ್ತಿದೆ. ಅಂತಾರಾಷ್ಟ್ರೀಯ ತೀರುವೆ ಬ್ಯಾಂಕು ಹಣಕಾಸು ಹಾಗೂ ಆರ್ಥಿಕ ವಿಷಯಗಳ ಸಂಶೋಧನೆ ಮತ್ತು ಸಲಹಾ ಕೇಂದ್ರವೂ ಆಗಿದೆ. ಅದು ಪ್ರಕಟಿಸುವ ವಾರ್ಷಿಕ ವರದಿಗಳು ಯುರೋಪಿನ ಆರ್ಥಿಕತೆಯ ಬಗ್ಗೆ ಅನೇಕ ಉನ್ನತಮಟ್ಟದ ಲೇಖನಗಳನ್ನೂ ಉಪಯುಕ್ತ ಅಂಕಿ ಅಂಶಗಳನ್ನೂ ದೊರಕಿಸುತ್ತವೆ. ಕೇಂದ್ರ ಬ್ಯಾಂಕುಗಳ ಕೇಳಿಕೆಯ ಅನುಸಾರವಾಗಿ ಬ್ಯಾಂಕು ಅನೇಕ ವಿಶೇಷ ಅಧ್ಯಯನಗಳನ್ನು ನಡೆಸಿ ಸಹಾಯ ನೀಡಿದೆ. ಈ ಎಲ್ಲಾ ಪ್ರಕಟಣೆಗಳು ಹಾಗೂ ಅಧ್ಯಯನಗಳು ಅಂತಾರಾಷ್ಟ್ರೀಯ ಹಣಕಾಸಿನ ಬಗ್ಗೆ ಇರುವ ಜ್ಞಾನಭಂಡಾರಕ್ಕೆ ಉಪಯುಕ್ತ ಕೊಡುಗೆಗಳು. ಹಣಬಲದ ಗಾತ್ರ, ವಿವರವಾದ ಕಾನೂನಿನ ಕಟ್ಟುನಿಟ್ಟುಗಳು, ಇವಕ್ಕಿಂತಲೂ ಒಂದು ಸಾರ್ವತ್ರಿಕ ಧ್ಯೇಯಕ್ಕೆ ಪಣತೊಟ್ಟು ನಿಂತಿರುವ ವ್ಯಕ್ತಿಗಳೊಳಗೆ ಇರುವ ಪರಸ್ಪರ ಸೌಹಾರ್ದ, ಯಾವ ಒಂದು ಅಂತಾರಾಷ್ಟ್ರೀಯ ಕಾರ್ಯಸಾಧನೆಗೂ ಅತಿ ಮುಖ್ಯ ಎಂಬುದಕ್ಕೆ ಬ್ಯಾಂಕಿನ ಈ ಹಲವಾರು ದಶಕಗಳ ಚರಿತ್ರೆಯೇ ನಿದರ್ಶನ. ಅಲ್ಲದೆ ಇಂದು ರೂಪುಗೊಳ್ಳುತ್ತಿರುವ ಯುರೋಪಿನ ರಾಷ್ಟ್ರಗಳ ಆರ್ಥಿಕ ಸಂಘಟನೆ ಹಾಗೂ ಅಂತಾರಾಷ್ಟ್ರೀಯ ಆರ್ಥಿಕ ಸಹಕಾರ - ಇವುಗಳಿಗೆ ಅಂತಾರಾಷ್ಟ್ರೀಯ ತೀರುವೆ ಬ್ಯಾಂಕು ಸಹಾಯಕವಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ "Board of Directors". www.bis.org/. Archived from the original on 22 April 2011. Retrieved 2011-04-14.
{{cite web}}
: Unknown parameter|deadurl=
ignored (help)
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- BIS website
- Global Banking: The Bank For International Settlements An analysis of the origins and functions of the BIS.
- The Money Club By Edward Jay Epstein, Harpers, 1983.
- Andrew Crockett statement to the IMF.
- An account of the use of reserve policy and other central bank powers in China at the Wayback Machine (archived ಫೆಬ್ರವರಿ ೪, ೨೦೧೨) By Henry C K Liu in the Asia Times.
- Banking with Hitler on YouTube, Timewatch, Paul Elston, producer Laurence Rees, narrator Sean Barrett (UK), BBC, 1998 (A video documentary about the BIS role in financing Nazi Germany)
- ಟೆಂಪ್ಲೇಟು:Dodis